ಗಾಯಾಳುವನ್ನು ರಕ್ಷಿಸುತ್ತಿರುವ ರಕ್ಷಣಾ ಸಿಬ್ಬಂದಿ
ಬ್ರುಸೆಲ್ಸ್: ಬೆಲ್ಜಿಯಂ ರಾಜಧಾನಿ ಬ್ರುಸೆಲ್ಸ್ ನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ಮೆಟ್ರೋ ರೈಲು ನಿಲ್ದಾಣಗಳಲ್ಲಿ ಸರಣಿ ಬಾಂಬ್ ಸ್ಫೋಟ ಸಂಭವಿಸಿದ್ದು, ಘಟನೆಯಲ್ಲಿ 27 ಮಂದಿ ಮೃತಪಟ್ಟಿದ್ದು, ಇಬ್ಬರು ಭಾರತೀಯರು ಸೇರಿದಂತೆ ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಝಾವೆಂಟಮ್ ವಿಮಾನ ನಿಲ್ದಾಣದ ಡಿಪಾರ್ಚರ್ ಹಾಲ್ ನಲ್ಲಿ ಮೊದಲ ಸ್ಫೋಟದ ಶಬ್ದ ಕೇಳಿಬಂದಿದ್ದು. 2 ಬಾಂಬ್‌ಗಳು ಮೊದಲು ಡಿಪಾರ್ಚರ್ ಟರ್ಮಿನಲ್‌ನ ಹೊರಭಾಗದಲ್ಲಿ ಸ್ಫೋಟಗೊಂಡಿದ್ದರೆ,ಕೆಲ ಹೊತ್ತಿನ ಬಳಿಕ ಇನ್ನೊಂದು ಬಾಂಬ್ ಮೆಟ್ರೋ ರೈಲು ನಿಲ್ದಾಣದಲ್ಲಿ ಸ್ಫೋಟಗೊಂಡಿದೆ. ತಪಾಸಣೆಯ ವೇಳೆ ಇನ್ನೂ ಕೆಲ ಬಾಂಬ್‌ಗಳು ಪತ್ತೆಯಾಗಿವೆ ಎಂದು ವರದಿಯಾಗಿದೆ.
ಬ್ರಸೆಲ್ಸ್ ವಿಮಾನ ನಿಲ್ದಾಣದಲ್ಲಿ ನಡೆದ ಸ್ಫೋಟಗಳಲ್ಲಿ 17 ಜನ , ಮೆಟ್ರೋ ನಿಲ್ದಾಣದಲ್ಲಿ ನಡೆದ ಸ್ಫೋಟದಲ್ಲಿ 10 ಜನರು ಸಾವನ್ನಪ್ಪಿದ್ದು 35ಕ್ಕೂ ಹೆಚ್ಚು ಜನ ಗಂಭೀರವಾಗಿ ಗಾಯಗೊಂಡಿದ್ದಾರೆ.
ಸ್ಫೋಟದ ವಿಡಿಯೋಗಳು ವಿಮಾನ ನಿಲ್ದಾಣದ ಸುತ್ತಮುತ್ತ ಸಿಸಿಟಿವಿಗಳಲ್ಲಿ ಸೆರೆಯಾಗಿದ್ದು, ಸ್ಫೋಟದ ಶಬ್ದ ಕೇಳುತ್ತಿದ್ದಂತೆಯೇ ಅಲ್ಲಿದ್ದ ಪ್ರಯಾಣಿಕರು ಓಡಿ ಹೋಗುತ್ತಿದ್ದ ದೃಶ್ಯ ಸಾಮಾನ್ಯವಾಗಿದೆ. ಸಿಸಿಟಿವಿ ವಿಡಿಯೋಗಳನ್ನು ಅವಲೋಕಿಸಿದರೆ ಪ್ರಬಲ ಸ್ಫೋಟಸಂಭವಿಸಿದ್ದು, ಘಟನೆಯಲ್ಲಿ ಹಲವರ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗುತ್ತಿದೆ. ಸ್ಫೋಟ ಸಂಭವಿಸಿ ವಿಮಾನ ನಿಲ್ದಾಣದಾದ್ಯಂತ ದಟ್ಟ ಹೊಗೆ ಅವರಿಸಿದ್ದು, ಪ್ರಾಣ ಭೀತಿಯಿಂದ ಜನರು ಓಡಿ ಹೋಗುತ್ತಿದ್ದಾರೆ.
ಇನ್ನು ವಿಚಾರ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ರಕ್ಷಣಾ ಸಿಬ್ಬಂದಿ ದೌಡಾಯಿಸಿದ್ದು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಇನ್ನು ನಿಲ್ದಾಣದಲ್ಲಿ ಮತ್ತಷ್ಟು ಜೀವಂತ ಬಾಂಬ್ ಗಳಿರುವ ಕುರಿತು ಶಂಕೆ ವ್ಯಕ್ತವಾಗುತ್ತಿದ್ದು, ಈ ಬಗೆ ಭದ್ರತಾ ಸಿಬ್ಬಂದ ಶೋಧ ಕಾರ್ಯದಲ್ಲಿ ತೊಡಗಿದ್ದಾರೆ. ಪ್ರಸ್ತುತ ಗಾಯಾಳುಗಳನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.