ವಾಷಿಂಗ್ ಟನ್: ಭಯೋತ್ಪಾದನೆ ನಿಗ್ರಹ ಸಹಕಾರ ವಿಷಯದಲ್ಲಿ ಭಾರತ-ಪಾಕಿಸ್ತಾನದ ನಡುವೆ ಹೆಚ್ಚಿನ ಮಾತುಕತೆ ನಡೆಯಬೇಕೆಂದು ಅಮೆರಿಕ ಹೇಳಿದೆ.
ಭಾರತ- ಪಾಕಿಸ್ತಾನದ ನಡುವೆ ಒಂದು ಹಂತದ ಉಗ್ರ ನಿಗ್ರಹ ಸಹಕಾರ ಇದೆ, ಈ ಕುರಿತು ಮಾತುಕತೆಯು ನಡೆಯುತ್ತಿದೆ, ಇದು ಮತ್ತಷ್ಟು ಬಲಗೊಳ್ಳಬೇಕು ಎಂದು ಅಮೆರಿಕದ ಉಪವಕ್ತಾರ ವಕ್ತಾರ ಮಾರ್ಕ್ ಟೋನರ್ ಹೇಳಿದ್ದಾರೆ.
ಉಭಯ ದೇಶಗಳ ನಡುವೆ ಉಗ್ರ ನಿಗ್ರಹದ ವಿಷಯಕ್ಕೆ ಸಂಬಂಧಿಸಿದಂತೆ ದ್ವಿಪಕ್ಷೀಯ ಮಾತುಕತೆ ಹೆಚ್ಚಾದರೆ ಆ ಪ್ರದೇಶದಲ್ಲಿ ಶಾಂತಿ ನೆಲೆಸಲು ಸಹಕಾರಿಯಾಗಲಿದೆ. ಇದು ಭಾರತ-ಪಾಕಿಸ್ತಾನ ಹಿತಾಸಕ್ತಿಯ ದೃಷ್ಟಿಯಿಂದಲೂ ಮಹತ್ವ ಪಡೆದಿದೆ ಎಂದು ಟೋನರ್ ಅಭಿಪ್ರಾಯಪಟ್ಟಿದ್ದಾರೆ.
ಪಾಕಿಸ್ತಾನಕ್ಕೆ ಅತ್ಯಾಧುನಿಕ ಎಫ್ 16 ಫೈಟರ್ ಜೆಟ್ ಗಳನ್ನು ಪೂರೈಸುವ ವಿಷಯದ ಬಗ್ಗೆ ಪ್ರತಿಕ್ರಿಯಿಸಿದ್ದ ಅಮೆರಿಕ, ಪಾಕಿಸ್ತಾನಕ್ಕೆ ನೀಡಲಾಗುವ ಎಫ್ 16 ಫೈಟರ್ ಜೆಟ್ ಗಳು ಭಯೋತ್ಪಾದನೆ ವಿರುದ್ಧ ಬಳಕೆಯಾಗಲಿವೆ ಎಂದು ದೃಢವಾದ ವಿಶ್ವಾಸ ವ್ಯಕ್ತಪಡಿಸಿತ್ತು. ಪಾಕಿಸ್ತಾನ ಈಗಾಗಲೇ ಭಯೋತ್ಪಾದಕರ ವಿರುದ್ಧ ಕಾರ್ಯಾಚರಣೆ ನಡೆಸುತ್ತಿದೆ ಎಂದು ಹೇಳಿದ್ದ ಅಮೆರಿಕ ಈಗ ಭಯೋತ್ಪಾದನೆ ನಿಗ್ರಹ ವಿಷಯದ ಬಗ್ಗೆ ಭಾರತ-ಪಾಕಿಸ್ತಾನದ ನಡುವೆ ಹೆಚ್ಚಿನ ಮಾತುಕತೆ ನಡೆಯಬೇಕಿದೆ ಎಂದು ಹೇಳಲು ಪ್ರಾರಂಭಿಸಿದೆ.