ಕ್ಯಾನ್ಬೆರಾ: ಅವಧಿ ಪೂರ್ವ ಚುನಾವಣೆ ನಡೆಸಲು ಮುಂದಾಗಿರುವ ಆಸ್ಟ್ರೇಲಿಯಾ ಪ್ರಧಾನಿ ಮಾಲ್ಕಮ್ ಟರ್ನ್ಬುಲ್ ಮೇ.9 ರಿಂದ ಚುನಾವಣಾ ಪ್ರಚಾರವನ್ನು ಅಧಿಕೃತವಾಗಿ ಪ್ರಾರಂಭಿಸಿದ್ದಾರೆ.
ಸಂಸತ್ ನ್ನು ವಿಸರ್ಜನೆ ಮಾಡುವಂತೆ ಆಸ್ಟ್ರೇಲಿಯಾ ಗೌರ್ನರ್ ಮನವಿ ಸಲ್ಲಿಸಿದ ಬೆನ್ನಲ್ಲೆ ಆಸ್ಟ್ರೇಲಿಯಾ ಪ್ರಧಾನಿ ಮಾಲ್ಕಮ್ ಟರ್ನ್ಬುಲ್ ಪ್ರಚಾರಕ್ಕೆ ಚಾಲನೆ ನೀಡಿದ್ದಾರೆ. ಚುನಾವಣಾ ಪ್ರಚಾರ ಪ್ರಾರಂಭಗೊಳ್ಳುತ್ತಿದ್ದಂತೆಯೇ ಆಸ್ಟ್ರೇಲಿಯಾ ಮಾಧ್ಯಮಗಳು ಜನಾಭಿಪ್ರಾಯ ಸಂಗ್ರಹಣೆಗೆ ಮುಂದಾಗಿದ್ದು, ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ವಿರೋಧ ಪಕ್ಷಕ್ಕೆ ಹೆಚ್ಚಿನ ಒಲವು ವ್ಯಕ್ತವಾಗಿದೆ ಎಂದು ಹೇಳಲಾಗಿದೆ.
ಅವಧಿಗೂ ಮುನ್ನವೇ ಚುನಾವಣೆ ನಡೆಯುತ್ತಿರುವುದರಿಂದ ತನ್ನ ಯೋಜನೆಗಳನ್ನು ಜನರಿಗೆ ತಲುಪಿಸಲು ಆಡಳಿತ ಪಕ್ಷಕ್ಕೆ ಹೆಚ್ಚು ಸಮಯ ಸಿಗಲಿದೆ. 1966 ರಿಂದ ನಡೆದಿರುವ ಚುನಾವಣೆಗಳಲ್ಲಿ ಇದೇ ಮೊದಲ ಬಾರಿಗೆ ಚುನಾವಣಾ ಪ್ರಚಾರಕ್ಕೆ ಅತಿ ಹೆಚ್ಚು ಸಮಯ ಸಿಗಲಿದೆ. ಜುಲೈ 2 ಕ್ಕೆ ಚುನಾವಣಾ ನಡೆಯಲಿದ್ದು, ಎಂಟು ವಾರಗಳ ಅವಧಿಯಲ್ಲಿ ಆಸ್ಟ್ರೇಲಿಯಾದ ಭವಿಷ್ಯಕ್ಕಾಗಿ ತಮ್ಮ ಸರ್ಕಾರ ಕೈಗೊಂಡಿರುವ ಬಜೆಟ್ ನ ಕ್ರಮಗಳ ಬಗ್ಗೆ ಜನರಿಗೆ ತಿಳಿಸಲಾಗುತ್ತದೆ ಎಂದು ಟರ್ನ್ಬುಲ್ ತಿಳಿಸಿದ್ದಾರೆ.
ಏ.18 ರಂದು ಆಸ್ಟ್ರೇಲಿಯಾದ ಮೇಲ್ಮನೆ, ಸೆನೆಟ್, ಸರ್ಕಾರದ ಒಂದು ಕಾನೂನಿನ ಕಾಯ್ದೆಯನ್ನು ಅಂಗೀಕರಿಸುವುದನ್ನು ತಿರಸ್ಕರಿಸಿತ್ತು. ಈ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾ ಪ್ರಧಾನಿ ಮಾಲ್ಕಮ್ ಟರ್ನ್ಬುಲ್ ಡಬಲ್ ಡಿಸಲ್ಯೂಷನ್ ಎಲೆಕ್ಷನ್ ಗೆ ಕರೆ ನೀಡಿದ್ದಾರೆ. ಆಸ್ಟ್ರೇಲಿಯಾದಲ್ಲಿ ಸರ್ಕಾರದ ಕಾನೂನು ಕಾಯ್ದೆ ಮೇಲ್ಮನೆಯಲ್ಲಿ ಎರಡು ಬಾರಿ ತಿರಸ್ಕೃತಗೊಂಡರೆ ಸೆನೆಟ್( ಸಂಸತ್) ನ್ನು ವಿಸರ್ಜಿಸಿ ಚುನಾವಣೆ ಎದುರಿಸುವುದಕ್ಕೆ ಡಬಲ್ ಡಿಸಲ್ಯೂಷನ್ ಎಲೆಕ್ಷನ್ ವ್ಯವಸ್ಥೆ ಅನುವು ಮಾಡಿಕೊಡುತ್ತದೆ. ಮೇ.3 ರಂದು ಬಜೆಟ್ ಮಂಡನೆಯಾ ಗಿದ್ದು ಸಂಸತ್ ನ್ನು ವಿಸರ್ಜನೆ ಮಾಡುವಂತೆ ಗೌರ್ನರ್ ಗೆ ಮನವಿ ಮಾಡಲಾಗಿದೆ.