ವಾಷಿಂಗ್ಟನ್: ಐಎಸ್ಐಎಸ್ ಉಗ್ರರು ಇದೇ ಮೊದಲ ಬಾರಿಗೆ ಮಕ್ಕಳಿಗೆ ಉಗ್ರ ಪಾಠ ಹೇಳಿಕೊಡಲು ಆಪ್ ವೊಂದನ್ನು ಅಭಿವೃದ್ಧಿಪಡಿಸಿದ್ದು, ಅದರಲ್ಲಿ ಎ ಫಾರ್ ಆಪಲ್, ಬಿ ಫಾರ್ ಬಾಲ್ ಎಂದು ಹೇಳಿಕೊಡುವ ಬದಲು ಜಿ ಫಾರ್ ಗನ್, ಟಿ ಫಾರ್ ಟ್ಯಾಂಕ್ ಹಾಗೂ ಆರ್ ಫಾರ್ ರಾಕೇಟ್ ಎಂದು ಹೇಳಿದೆ.
ಆಂಡ್ರಾಯ್ಡ್ ಮೊಬೈಲ್ ಗಳಲ್ಲಿ ಅರೇಬಿಕ್ ಅಕ್ಷರ ಹೇಳಿಕೊಡುವ ಈ ಆಪ್ ಅನ್ನು ಇಸ್ಲಾಮಿಕ್ ಸ್ಟೇಟ್ ಟೆಲಿಗ್ರಾಮ್ ಚಾನೆಲ್ ಮೂಲಕ ಬಿಡುಗಡೆಗೊಳಿಸಲಾಗಿದೆ ಎಂದು ಲಾಂಗ್ ವಾರ್ ಜರ್ನಲ್ ವರದಿ ಮಾಡಿದೆ.
ಮಕ್ಕಳು ಅರೇಬಿಕ್ ಅಕ್ಷರಗಳನ್ನು ಸುಲಭವಾಗಿ ನೆನಪಿಟ್ಟುಕೊಳ್ಳಲು ಇಸ್ಲಾಮಿಕ್ ಹಾಡುಗಳನ್ನು ಈ ಆಪ್ ನಲ್ಲಿ ಸೇರಿಸಲಾಗಿದೆ. ಜಿ ಎಂದರೆ ಗನ್, ಟಿ ಎಂದರೆ ಟ್ಯಾಂಕ್ ಹಾಗೂ ಆರ್ ಎಂದರೆ ರಾಕೇಟ್ ನಂತಹ ಪದಗಳನ್ನು ಈ ಅಪ್ಲಿಕೇಷನ್ ನಲ್ಲಿ ಕಲಿಸಬಹುದಾಗಿದೆ. ಅಲ್ಲದೆ ಇಂಥ ಪದಗಳು ಹಾಗೂ ಚಿತ್ರಗಳಿಗೆ ಗಾಢ ಬಣ್ಣವನ್ನು ನೀಡಲಾಗಿದೆ.
ಮಗು ತಾಯಿಯ ಗರ್ಭದಲ್ಲಿರುವಾಗಲೇ ಉಗ್ರವಾದದ ಪಾಠ ಹೇಳಿಕೊಡುವ ಐಎಸ್ಐಎಸ್ ಇದೀಗ ಮಕ್ಕಳಿಗಾಗಿಯೇ ಆಪ್ ವೊಂದನ್ನು ಬಿಡುಗಡೆ ಮಾಡಿದೆ.