ವಾಷಿಂಗ್ ಟನ್: ಇಸೀಸ್ ಉಗ್ರ ಸಂಘಟನೆ ಕಪಿಮುಷ್ಟಿಯಲ್ಲಿ ಸಿಲುಕಿಕೊಂಡಿರುವ ಸಿರಿಯಾಗೆ ಅಮೆರಿಕದ ಸೇನೆಯ ಉನ್ನತ ಅಧಿಕಾರಿ (ಕಮಾಂಡರ್) ಸದ್ದಿಲ್ಲದೇ ಭೇಟಿ ನೀಡಿ ಇಸೀಸ್ ವಿರುದ್ಧ ಹೋರಾಡಲು ಸ್ಥಳೀಯ ಸೇನೆಗೆ ತರಬೇತಿ ನೀಡುತ್ತಿರುವ ವಾಷಿಂಗ್ ಟನ್ ನ ಪಡೆಯೊಂದಿಗೆ ಮಾತುಕತೆ ನಡೆಸಿದ್ದಾರೆ.
ಜೋಸೆಫ್ ವೊಟೆಲ್ ಸಿರಿಯಾಗೆ ಭೇಟಿ ನೀಡಿರುವ ಅಮೆರಿಕದ ಮೊದಲ ಸೇನಾ ಅಧಿಕಾರಿಯಾಗಿದ್ದು, ಇಸೀಸ್ ಉಗ್ರ ಸಂಘಟನೆ ವಿರುದ್ಧ ಹೋರಾಡುತ್ತಿರುವ ಸಿರಿಯಾದ ಡೆಮಾಕ್ರೆಟಿಕ್ ಪಡೆಗಳ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದಾರೆ. ಅಮೆರಿಕ ಸಿರಿಯಾಗೆ 250 ವಿಶೇಷ ಕಾರ್ಯಾಚರಣೆ ಪಡೆಗಳನ್ನು ಕಳಿಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದ್ದು, ಈ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ಅಮೆರಿಕ ಬಿಡುಗಡೆ ಮಾಡಿಲ್ಲ.
ಅಮೆರಿಕ ಕಳಿಸಿರುವ ವಿಶೇಷ ಪಡೆಗಳು, ಇಸೀಸ್ ಉಗ್ರರ ವಿರುದ್ಧ ಹೋರಾಡಲು ಸಿರಿಯಾದ ಸೇನಾ ಪಡೆಗಳಿಗೆ ತರಬೇತಿ ನೀಡುತ್ತಿದ್ದು, ಸಿರಿಯಾವನ್ನು ಇಸೀಸ್ ಉಗ್ರರಿಂದ ಕಾಪಾಡಲು ಯತ್ನಿಸುತ್ತಿವೆ.