ವಾಷಿಂಗ್ ಟನ್: ಭಾರತೀಯ ಸಂಜಾತರಾದ ಅಮೆರಿಕಾದ ವಿದ್ಯಾರ್ಥಿಗಳು ಅಮೆರಿಕದ ಪ್ರಸಿದ್ಧ ಸ್ಪರ್ಧೆ 'ನ್ಯಾಷನಲ್ ಸ್ಪೆಲ್ಲಿಂಗ್ ಬೀ'ಯಲ್ಲಿ ಜಂಟಿ ವಿಜೇತರಾಗಿದ್ದಾರೆ.
ಜೈರಾಮ್ ಜಗದೀಶ್ ಹತ್ವಾರ್ (13 ) ಹಾಗೂ ನಿಹಾರ್ ಸಾಯಿ ರೆಡ್ಡಿ ಜಂಗಾ(11 ) ಪ್ರತಿಷ್ಠಿತ ಸ್ಪೆಲ್ಲಿಂಗ್ ಬೀ ಪ್ರಶಸ್ತಿಗೆ ಭಾಜನರಾದ ಭಾರತೀಯ ಮೂಲದ ವಿದ್ಯಾರ್ಥಿಗಳಾಗಿದ್ದಾರೆ. ಉಪಾಂತ್ಯ ಸುತ್ತಿನಲ್ಲಿ ಸಾಮಾಜಿಕ ಸಂಪರ್ಕ ವಿಷಯಕ್ಕೆ ಸಂಬಂಧಿಸಿದ ‘gesellschaft’ ಎಂಬ ಪದವನ್ನು ನಿಹಾರ್ ಹಾಗೂ ಶರೀರ ಚಲನೆಗೆ ಸಂಬಂಧಿಸಿದ ‘Feldenkrais’ ಎಂಬ ಪದವನ್ನು ಜೈರಾಮ್ ಸರಿಯಾಗಿ ಉಚ್ಚರಿಸಿ ಪ್ರಶಸ್ತಿಗೆ ಆಯ್ಕೆಯಾದರು ಎಂದು ಸಿಎನ್ಎನ್ ವರದಿ ಮಾಡಿದೆ.
ಉಪಾಂತ್ಯದ ಸುತ್ತಿಗೂ ಮುನ್ನ ಎರಡು ಬಾರಿ ಜೈರಾಮ್ ಸ್ಪರ್ಧೆಯಿಂದ ಹೊರಬೀಳುವ ಸಾಧ್ಯತೆ ಕಂಡು ಬಂತಾದರೂ, ನಿಹಾರ್ ಕೆಲವು ಪದಗಳನ್ನು ತಪ್ಪಿಸಿದ್ದರಿಂದಾಗಿ ಜೈರಾಮ್ ಸ್ಪರ್ಧೆಗೆ ಮರಳಲು ಅನುಕೂಲವಾಯಿತು. ಈ ಪೈಕಿ ನಿಹಾರ್ ಸಾಯಿ ರೆಡ್ಡಿ ಅತಿ ಕಿರಿಯ ಪ್ರಶಸ್ತಿ ವಿಜೇತ ಎಂಬ ಹೆಗ್ಗಳಿಕೆಗೂ ಪಾತ್ರನಾಗಿದ್ದಾನೆ. ಸ್ಪರ್ಧೆಯ ಅಂತಿಮ ಸುತ್ತಿನಲ್ಲಿದ್ದ 10 ವಿದ್ಯಾರ್ಥಿಗಳ ಪೈಕಿ ಏಳು ಮಂದಿ ಭಾರತ ಮೂಲದ ಅಮೆರಿಕನ್ನರಾಗಿದ್ದರು. ಪ್ರಶಸ್ತಿ ಗೆದ್ದ ನಿಹಾರ್, ಟೆಕ್ಸಾಸ್‌ನಲ್ಲಿ ಐದನೇ ತರಗತಿ ಹಾಗೂ ಜೈರಾಮ್ ನ್ಯೂಯಾರ್ಕ್‌ನಲ್ಲಿ ಏಳನೇ ತರಗತಿ ಓದುತ್ತಿದ್ದಾರೆ.