ವಿದೇಶ

ಸಿರಿಯಾ ಮೇಲೆ ರಷ್ಯಾ ದಾಳಿ; ಆಸ್ಪತ್ರೆಗಳು ಧ್ವಂಸ; ಹಸುಳೆಗಳು ಒಳಗೊಂಡಂತೆ ೬೦ ಮೃತ

Guruprasad Narayana

ಸೋಮವಾರ ರಷ್ಯಾ ನಡೆಸಿದ ದಾಳಿಯಲ್ಲಿ ಉತ್ತರ ಸಿರಿಯಾದ ಎರಡು ಆಸ್ಪತ್ರೆಗಳು ತೀವ್ರವಾಗಿ ಹಾನಿಗೊಂಡಿದ್ದು, ೬೦ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ. ರಾಷ್ಟ್ರಾದ್ಯಂತ ಕದನವಿರಾಮ ಘೋಷಿಸಲಾಗಿದ್ದರೂ ನಡೆದ ಈ ಮಾರಣಾಂತಿಕ ದಾಳಿಯಲ್ಲಿ ಹಸುಳೆಗಳು ಕೂಡ ಮೃತಪಟ್ಟಿದ್ದಾರೆ.

ಇಡ್ಲಿಬ್ ನಗರದ ದ ನ್ಯಾಷನಲ್ ಮತ್ತು ಐಬಿನ್ ಸಿನಾ ಆಸ್ಪತ್ರೆಗಳು ಹಾನಿಗೊಂಡಿದ್ದು ೧೦೦ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.

ಧ್ವಂಸಗೊಂಡಿರುವ ಆಸ್ಪತ್ರೆಗಳಿಂದ ಮಕ್ಕಳನ್ನು ಮತ್ತು ಹಸುಳೆಗಳನ್ನು ಹೊರಗೆಳೆಯುತ್ತಿರುವ ಮನಕಲಕುವ ದೃಶ್ಯಗಳು ವಿಡಿಯೋದಲ್ಲಿ ಕಾಣಿಸಿಕೊಂಡಿದೆ. ತುರ್ತು ನಿಗಾ ಕಾರ್ಯಕರ್ತರು ಈ ಭಗ್ನವೇಶದಿಂದ ಬಾಲಕನೊಬ್ಬನನ್ನು ಕೂಡ ರಕ್ಷಿಸಿದ್ದಾರೆ.

ಈ ಸಂತ್ರಸ್ತರಲ್ಲಿ ಬಹುತೇಕರು ಮಹಿಳೆಯರು ಮತ್ತು ಮಕ್ಕಳು ಎಂದು ರಕ್ಷಣಾ ಕಾರ್ಯಕರ್ತ ಶರೀಫ್ ಸಮಾದಿ ಹೇಳಿದ್ದಾರೆ.

"ಅವರು ಮುಗ್ಧರನ್ನು ದಾಳಿ ಮಾಡಿಕೊಂಡಿದ್ದಾರೆ" ಎಂದಿರುವ ಅವರು "ಆಸ್ಪತ್ರೆಗಳೇ ದಾಳಿಗೆ ಒಳಗಾಗಿರುವುದರಿಂದ ಜನ ಚಿಕಿತ್ಸೆಗೆ ಬರಲೂ ಭಯ ಪಡುತ್ತಿದ್ದಾರೆ" ಎಂದು ಅವರು ತಿಳಿಸಿದ್ದಾರೆ.

ರಷ್ಯಾದ ಯುದ್ಧ ವಿಮಾನ ಈ ದಾಳಿ ನಡೆಸಿದ ಎಂದು ಲಂಡನ್ ಮೂಲದ ಮಾನವ ಹಕ್ಕುಗಳ ಪರಿವೀಕ್ಷಣಾ ತಂಡ ತಿಳಿಸಿದ್ದು "ಈ ದಾಳಿ ಇಡ್ಲಿಬ್ ನಗರದಲ್ಲಿ ತೀವ್ರವಾಗಿದೆ. ಇಡ್ಲಿಬ್ ಕದನವಿರಾಮ ಘೋಷಣೆಗೆ ಒಳಪಡದೆ ಇದ್ದರೂ, ಶಾಂತಿಯುತವಾಗಿತ್ತು" ಎಂದು ಈ ತಂಡದ ಮುಖ್ಯಸ್ಥ ರಮಿ ಅಬ್ದೆಲ್ ರಹಮಾನ್ ತಿಳಿಸಿದ್ದಾರೆ.

ಇಡ್ಲಿಬ್ ನಗರ ಆಲ್ ಕೈದಾ ಸಂಸ್ಥೆಯ ಸಹಚರ ಸಂಸ್ಥೆ ಜಭಾತ್ ಅಲ್ ನುಸ್ರಾ ನಿಯಂತ್ರಣಕ್ಕೆ ಒಳಪಟ್ಟಿದೆ. ಫೆಬ್ರವರಿ ೨೭ ರಂದು ರಷ್ಯಾ ಬೆಂಬಲಿತ ಪಡೆಗಳು ಮತ್ತು ಅಮೆರಿಕಾ ಬೆಂಬಲಿತ ಜಿಹಾದಿಯೇತರ ಪಡೆಗಳ ನಡುವೆ ಘೋಷಣೆಯಾಗಿರುವ ಕದನವಿರಾಮಕ್ಕೆ ಜಭಾತ್ ಅಲ್ ನುಸ್ರಾ ಒಪ್ಪಿಕೊಂಡಿಲ್ಲ ಆದರೆ ಅಂತರಾಷ್ಟ್ರೀಯ ಕಾನೂನಿನ ಪ್ರಕಾರ ಆಸ್ಪತ್ರೆಗಳು ದಾಳಿಗಳಿಂದ ಮುಕ್ತವಾಗಿರಬೇಕು.

ಈ ಪರಿವೀಕ್ಷಣಾ ತಂಡದ ಪ್ರಕಾರ ಕಳೆದ ಸೆಪ್ಟಂಬರ್ ನಿಂದ ರಷ್ಯಾ ದಾಳಿ ಪ್ರಾರಂಭಿಸಿದಾಗಿಲಿಂದಲೂ ೨೦೦೦ಕ್ಕೂ ಹೆಚ್ಚು ನಾಗರಿಕರನ್ನು ಹತ್ಯೆ ಮಾಡಿದೆ ಎನ್ನಲಾಗಿದೆ.

ಸಿರಿಯಾದ ನಾಗರಿಕ ಯುದ್ಧದಿಂದ ಇಲ್ಲಿಯವರೆಗೂ ೪ ಲಕ್ಷಕ್ಕೂ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದು, ಅರ್ಧಕ್ಕೂ ಹೆಚ್ಚು ಜನ ದೇಶ ತೊರೆದು ಯೂರೋಪ್ ರಾಷ್ಟ್ರಗಳಿಗೆ ವಲಸೆ ಹೋಗಿದ್ದಾರೆ.

SCROLL FOR NEXT