ಇಸ್ಲಾಮಾಬಾದ್: ಭಾರತದ ಮೇಲೆ ದ್ವೇಷ ಸಾಧಿಸಲು ಬಂದಿರು ಪಾಕಿಸ್ತಾನ ಮತ್ತೆ ಐವರು ಭಾರತೀಯ ರಾಯಭಾರಿಗಳ ಮೇಲೆ ಬೇಹುಗಾರಿಕೆ ಆರೋಪವನ್ನು ಮಾಡಿದ್ದು, ದೇಶ ತೊರೆಯುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದೆ ಎಂದು ಗುರುವಾರ ತಿಳಿದುಬಂದಿದೆ.
ಭಾರತದ ರಕ್ಷಣಾ ಇಲಾಖೆಯ ಮಾಹಿತಿಗಳನ್ನು ಪಾಕಿಸ್ತಾನಕ್ಕೆ ಬೇಹುಗಾರಿಕೆ ಮಾಡುತ್ತಿದ್ದಾರೆಂದು ಹೇಳಿ ಕೆಲ ದಿನಗಳ ಹಿಂದಷ್ಟೇ ದೆಹಲಿ ಪೊಲೀಸರು ಪಾಕಿಸ್ತಾನ ರಾಯಭಾರಿ ಕಚೇರಿಯ ಅಧಿಕಾರಿಗಳನ್ನು ಬಂಧನಕ್ಕೊಳಪಡಿಸಿ ವಿಚಾರಣೆ ನಡೆಸಿದ್ದರು. ಅಲ್ಲದೆ 48 ಗಂಟೆಗಳೊಳಗಾಗಿ ಭಾರತ ತೊರೆಯುವಂತೆ ಆದೇಶಿಸಿತ್ತು. ಇದರ ಬೆನ್ನಲ್ಲೇ ಭಾರತದ ವಿರುದ್ಧ ದ್ವೇಷ ತೀರಿಸಿಕೊಳ್ಳಲು ಮುಂದಾಗಿದ್ದ ಪಾಕಿಸ್ತಾನ ಭಾರತೀಯ ರಾಯಭಾರಿ ಅಧಿಕಾರಿಗಳ ವಿರುದ್ಧವೂ ಬೇಹುಗಾರಿಕೆ ಆರೋಪ ಮಾಡಲು ಆರಂಭಿಸಿತ್ತು. ಅಲ್ಲದೆ, ಭಾರತೀಯ ಅಧಿಕಾರಿಗಳು 48 ಗಂಟೆಗಳೊಳಗಾಗಿ ಪಾಕಿಸ್ತಾನ ತೊರೆಯುವಂತೆ ತಿಳಿಸಿತ್ತು.
ಇದೀಗ ಮತ್ತೆ ಐವರು ಭಾರತೀಯ ಅಧಿಕಾರಿಗಳ ವಿರುದ್ಧ ಪಾಕಿಸ್ತಾನ ಬೇಹುಗಾರಿಕೆ ಆರೋಪವನ್ನು ಮಾಡುತ್ತಿದ್ದು, ಅಧಿಕಾರಿಗಳ ಹೆಸರುಗಳು ಹಾಗೂ ಅವರ ಮಾಹಿತಿಗಳನ್ನು ಪಾಕಿಸ್ತಾನ ಮಾಧ್ಯಮಗಳು ಬಹಿರಂಗಪಡಿಸುತ್ತಿವೆ ಎಂದು ಹೇಳಲಾಗುತ್ತಿದೆ.