ಫಿಲಿಪೈನ್ಸ್ ಅಧ್ಯಕ್ಷ-ಡೊನಾಲ್ಡ್ ಟ್ರಂಪ್
ಕೌಲಲಾಂಪುರ್: ಡೊನಾಲ್ಡ್ ಟ್ರಂಪ್ ಅಮೆರಿಕದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ವಿಶ್ವದ ನಾಯಕರು ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆ ಅಭಿನಂದನೆ ಸಲ್ಲಿಸುತ್ತಿದ್ದಾರೆ. ಇದೇ ವೇಳೆ ಫಿಲಿಪೈನ್ ಅಧ್ಯಕ್ಷ ರೋಡ್ರಿಗೋ ಸಹ ಡ್ಯುಟರ್ಟೆ ಡೊನಾಲ್ಡ್ ಟ್ರಂಪ್ ಆಯ್ಕೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಅಮೆರಿಕದೊಂದಿಗಿನ ಜಗಳವನ್ನು ನಿಲ್ಲಿಸುವ ಪ್ರತಿಜ್ಞೆ ಮಾಡಿದ್ದಾರೆ.
ಕೌಲಲಾಂಪುರ್ ನಲ್ಲಿರುವ ಫಿಲಿಪೈನ್ ಸಮುದಾಯವನ್ನುದ್ದೇಶಿಸಿ ಮಾತನಾಡಿರುವ ಅಧ್ಯಕ್ಷ ರೋಡ್ರಿಗೋ, " ಅಮೆರಿಕ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡೊನಾಲ್ಡ್ ಟ್ರಂಪ್ ಅವರಿಗೆ ಅಭಿನಂದನೆ ಸಲ್ಲಿಸುತ್ತೇವೆ. ಉಭಯ ರಾಷ್ಟ್ರಗಳು ಹಲವು ವಿಷಯಗಳಲ್ಲಿ ಸಮಾನ ಮನಸ್ಕ ರಾಷ್ಟ್ರಗಳಾಗಿವೆ. ಆದ್ದರಿಂದ ಅಮೆರಿಕದೊಂದಿಗಿನ ಜಗಳವನ್ನು ನಿಲ್ಲಿಸುತ್ತೇನೆ, ನನಗೆ ಅಮೆರಿಕಾದೊಂದಿಗೆ ಕಾಳಗ ಬೇಡ ಏಕೆಂದರೆ ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ರೋಡ್ರಿಗೋ ಹೇಳಿದ್ದಾರೆ.
2016ರಲ್ಲಿ ನಡೆದ ಫಿಲಿಪೇನ್ಸ್ ಚುನಾವಣೆಯಲ್ಲಿ ರೋಡ್ರಿಗೋ ಅವರನ್ನು ಡೊನಾಲ್ಡ್ ಟ್ರಂಪ್ ಗೆ ಹೋಲಿಸಲಾಗಿತ್ತು ಹಾಗೂ ಟ್ರಂಪ್ ಆಫ್ ಈಸ್ಟ್ ಎಂದೂ ಬಣ್ಣಿಸಲಾಗಿತ್ತು. ರಾಷ್ಟ್ರಮಟ್ಟದ ರಾಜಕಾರಣದಲ್ಲಿ ಗುರುತಿಸಿಕೊಳ್ಳದೇ ಇದ್ದರೂ ಸಹ ಫಿಲಿಪೈನ್ಸ್ ಅಧ್ಯಕ್ಷರಾಗಿರುವ ರೋಡ್ರಿಗೋ, ಡೊನಾಲ್ಡ್ ಟ್ರಂಪ್ ಇಬ್ಬರೂ ಅವರ ದೇಶಗಳಿಗೆ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದಾರೆ. ಫಿಲಿಪೈನ್ಸ್ ಅಧ್ಯಕ್ಷ ಅಮೆರಿಕದ ಹಾಲಿ ಅಧ್ಯಕ್ಷ ಬರಾಕ್ ಒಬಾಮ ಅವರ ವಿರುದ್ಧ ತೀವ್ರ ಟೀಕಾ ಪ್ರಹಾರ ನಡೆಸಿದ್ದರು.