ಡೊನಾಲ್ಡ್ ಟ್ರಂಪ್- ಬರಾಕ್ ಒಬಾಮ ಭೇಟಿ
ವಾಷಿಂಗ್ ಟನ್: ಅಮೆರಿಕದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡೊನಾಲ್ಡ್ ಟ್ರಂಪ್, ಅಮೆರಿಕದ ಹಾಲಿ ಅಧ್ಯಕ್ಷ ಬರಾಕ್ ಒಬಾಮ ಅವರನ್ನು ಶ್ವೇತ ಭವನದಲ್ಲಿ ಭೇಟಿಯಾಗಿದ್ದು, ಚರ್ಚೆ ನಡೆಸಿದ್ದಾರೆ.
ಓವಲ್ ಕಚೇರಿಯಲ್ಲಿ ಡೊನಾಲ್ಡ್ ಟ್ರಂಪ್ ಹಾಗೂ ಬರಾಕ್ ಒಬಾಮ ಚರ್ಚೆ ನಡೆಸಿದ್ದು, " ಅಮೆರಿಕಾದ ಹಲವು ಒಳ್ಳೆಯ ಹಾಗೂ ಸಂಕಷ್ಟದ ಪರಿಸ್ಥಿತಿಗಳ ಬಗ್ಗೆ ಇಬ್ಬರೂ ಚರ್ಚೆ ನಡೆಸಿದ್ದೇವೆ, ಈ ವೇಳೆ ಬರಾಕ್ ಒಬಾಮ ಅವರು ಈ ವರೆಗೂ ಸಾಧಿಸಲಾಗಿರುವ ವಿಷಯಗಳ ಬಗ್ಗೆ ಹೇಳಿದರು ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಅಧ್ಯಕ್ಷರಾಗಿ ಆಯ್ಕೆಗೊಂಡ ಬೆನ್ನಲ್ಲೇ ನಡೆಸಿದ್ದ ಭಾಷಣದಲ್ಲಿ ಬರಾಕ್ ಒಬಾಮ ಅವರೊಂದಿಗಿನ ಭೇಟಿಯನ್ನು ಎದುರು ನೋಡುತ್ತಿದ್ದೇನೆ ಎಂದು ಹೇಳಿದ್ದರು.
2017 ರ ಜ.20 ರಂದು ಅಧಿಕಾರ ವಹಿಸಿಕೊಳ್ಳಲಿರುವ ಡೊನಾಲ್ಡ್ ಟ್ರಂಪ್ ಅವರು ಆಡಳಿತದಲ್ಲಿ ಯಶಸ್ವಿಯಾಗಲು ಅಗತ್ಯ ನೆರವನ್ನು ನೀಡುವುದಾಗಿ ಬರಾಕ್ ಒಬಾಮ ಹೇಳಿದ್ದು, ತನ್ನೆದುರಿಗೆ ಇರುವ ಸವಾಲುಗಳನ್ನು ಎದುರಿಸಲು ರಾಷ್ಟ್ರ ಒಗ್ಗಟ್ಟಿನಿಂದ ಇರಬೇಕು ಎಂದು ಕರೆ ನೀಡಿದ್ದಾರೆ.
"ನಿಮ್ಮ ಯಶಸ್ಸಿಗೆ ಅಗತ್ಯವಿರುವ ಎಲ್ಲವನ್ನೂ ನಾವು ಮಾಡಲು ಸಿದ್ಧರಿದ್ದೇವೆ, ಏಕೆಂದರೆ ನೀವು ಯಶಸ್ವಿಯಾದರೆ, ರಾಷ್ಟ್ರ ಯಶಸ್ವಿಯಾದಂತೆ" ಎಂದು ಭೇಟಿಯ ಅಂತ್ಯದಲ್ಲಿ ಬರಾಕ್ ಒಬಾಮ ಡೊನಾಲ್ಡ್ ಟ್ರಂಪ್ ಗೆ ತಿಳಿಸಿದ್ದಾರೆ. ಡೊನಾಲ್ಡ್ ಟ್ರಂಪ್ ಅವರು ತಮ್ಮ ಚುನವಣಾ ಭಾಷಣಗಳಲ್ಲಿ ಬರಾಕ್ ಒಬಾಮ ಅವರನ್ನು ತೀವ್ರವಾಗಿ ಟೀಕಿಸುತ್ತಿದ್ದರು. ಒಬಾಮ ಸಹ ಡೊನಾಲ್ಡ್ ಟ್ರಂಪ್ ಅವರನ್ನು ಟೀಕಿಸಿ ಅಮೆರಿಕ ಅಧ್ಯಕ್ಷರಾಗಲು ಅರ್ಹವಾದ ವ್ಯಕ್ತಿಯಲ್ಲ ಎಂದು ಹೇಳಿದ್ದರು. ಆದರೆ ಡೊನಾಲ್ಡ್ ಟ್ರಂಪ್ ಅವರು ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದು, ಭಿನ್ನಾಭಿಪ್ರಾಯಗಳ ಹೊರತಾಗಿಯೂ, ಈ ಹಿಂದೆ ರಿಪಬ್ಲಿಕನ್ ಪಕ್ಷದ ಅಧ್ಯಕ್ಷರಾಗಿದ್ದ ಜಾರ್ಜ್ ಡಬ್ಲ್ಯೂ ಬುಷ್ 2008 ರಲ್ಲಿ ತಮಗೆ ಅಧಿಕಾರ ಹಸ್ತಾಂತರ ಮಾಡಿದ ರೀತಿಯಲ್ಲೇ ರಿಪಬ್ಲಿಕನ್ ಪಕ್ಷದಿಂದ ಈಗ ಅಧ್ಯಕ್ಷರಾಗಿ ಆಯ್ಕೆಗೊಂಡಿರುವ ಡೊನಾಲ್ಡ್ ಟ್ರಂಪ್ ಅವರಿಗೂ ಅಧಿಕಾರ ಹಸ್ತಾಂತರ ಮಾಡುವುದಾಗಿ ಒಬಾಮ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics