ವಾಷಿಂಗ್ಟನ್: ಹಾಲಿ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಸೊಗಸುಗಾರ ಮತ್ತು ಅವರಿಗೆ ಉತ್ತಮ ಹಾಸ್ಯಪ್ರಜ್ಞೆ ಇದೆ ಎಂದು ಚುನಾಯಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಅಮೆರಿಕದ ವೈಟ್ ಹೌಸ್ ನ ಒವಲ್ ಕಚೇರಿಯಲ್ಲಿ ಕಳೆದ ಗುರುವಾರ ಮಾತುಕತೆ ಭೇಟಿಯಾಗಿ ಮೊದಲ ಬಾರಿಗೆ ಮುಖಾಮುಖಿಯಾಗಿದ್ದರು. ಈ ವೇಳೆ ಒಟ್ಟಿಗೆ ಸೇರಿ ಕೆಲ ಕಾಲ ಮಾತುಕತೆ ನಡೆಸಿದ್ದಾಗಿ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. 15 ನಿಮಿಷಗಳ ಚರ್ಚೆಗೆ ಯೋಜಿತಗೊಂಡಿತ್ತು ಆದರೆ ಒಬಾಮರ ಹಾಸ್ಯಪ್ರಜ್ಞೆಯಿಂದಾಗಿ ಚರ್ಚೆ 90 ನಿಮಿಷಗಳವರೆಗೂ ಮುಂದುವರೆಯಿತು ಎಂದರು.
ನಾವಿಬ್ಬರು ಒಟ್ಟಿಗೆ ಮಾತನಾಡುವಾಗ ಪ್ರಸ್ತುತ ಚುನಾವಣೆ ಸಂಬಂಧಿತ ವಿಚಾರಗಳನ್ನು ಮಾತನಾಡಲಿಲ್ಲ ಆದರೆ ಕೆಲ ಕಠಿಣ ವಿಷಯಗಳ ಕುರಿತು ಗಂಭೀರ ಚರ್ಚೆ ನಡೆಸಲಾಯಿತು ಎಂದರು. ಮಾತುಕತೆ ವೇಳೆ ಅವರೊಬ್ಬ ಸೊಗಸುಗಾರ, ಜಾಣ್ಮೆ ಹಾಗೂ ಉತ್ತಮ ವ್ಯಕ್ತಿ. ಅವರಿಗೆ ಉತ್ತಮ ಹಾಸ್ಯಪ್ರಜ್ಞೆ ಇದೆ. ಕಠಿಣ ವಿಷಯಗಳ ಚರ್ಚೆ ವೇಳೆ ಉತ್ತಮ ಹಾಸ್ಯ ಚಟಾಕಿ ಹಾರಿಸುತ್ತಾರೆ ಎಂದು ನನ್ನ ಅರಿವಿಗೆ ಬಂತು ಎಂದರು.
ಬರಾಕ್ ಒಬಾಮ ಮತ್ತು ಡೊನಾಲ್ಡ್ ಟ್ರಂಪ್ ಅವರು ಅಮೆರಿಕ ಅಧ್ಯಕ್ಷೀಯ ಚುನಾವಣೆ ಪ್ರಚಾರದ ವೇಳೆ ಒಬ್ಬರ ವಿರುದ್ಧ ಒಬ್ಬರು ಹರಿಹಾಯ್ದಿದ್ದರು.