ವಿದೇಶ

ಪಾಕ್ ಸೈನಿಕರ ಹತ್ಯೆ: ಭಾರತೀಯ ರಾಯಭಾರಿಗೆ ಸಮನ್ಸ್ ಜಾರಿ ಮಾಡಿದ ಪಾಕ್

Manjula VN

ಇಸ್ಲಾಮಾಬಾದ್: ಅಪ್ರಚೋದಿತ ಗುಂಡಿನ ದಾಳಿಗೆ ದಿಟ್ಟ ಉತ್ತರ ನೀಡುವ ಮೂಲಕ 7 ಪಾಕಿಸ್ತಾನ ಸೈನಿಕರನ್ನು ಭಾರತೀಯ ಸೇನೆ ಹತ್ಯೆ ಮಾಡಿದ್ದಕ್ಕೆ ತೀವ್ರ ಕೆಂಡಾಮಂಡಲವಾಗಿರುವ ಪಾಕಿಸ್ತಾನ, ಭಾರತದ ಹೈ ಕಮಿಷನರ್ ಗೌತಮ್ ಬಾಂಬಾವಲೆ ಅವರಿಗೆ ಸಮನ್ಸ್ ಜಾರಿ ಮಾಡಿದೆ ಎಂದು ಮಂಗಳವಾರ ತಿಳಿದುಬಂದಿದೆ.

ಪಾಕಿಸ್ತಾನ ವಿದೇಶಾಂಗ ಕಾರ್ಯದರ್ಶಿ ಐಜಾಜ್ ಅಹ್ಮದ್ ಚೌದರಿ ಅವರು ಭಾರತೀಯ ರಾಯಭಾರಿಗೆ ಸಮನ್ಸ್ ಜಾರಿ ಮಾಡಿದ್ದು, ಗಡಿಯಲ್ಲಿ ಭಾರತೀಯ ಸೇನೆ ಅಪ್ರಚೋದಿತ ಗುಂಡಿನ ದಾಳಿ ನಡೆಸುತ್ತಿದ್ದು, ಪರಿಣಾಮ 7 ಪಾಕಿಸ್ತಾನ ಸೈನಿಕರು ಸಾವನ್ನಪ್ಪಿದ್ದಾರೆ. ಇದನ್ನು ಪಾಕಿಸ್ತಾನ ತೀವ್ರವಾಗಿ ಖಂಡಿಸುತ್ತದೆ. ಕಳೆದ ಎರಡು ತಿಂಗಳಿನಿಂದಲೂ ಗಡಿಯಲ್ಲಿ ಕದನ ವಿರಾಮವನ್ನು ಉಲ್ಲಂಘಿಸಲಾಗುತ್ತಿದೆ. ಯುದ್ಧಾಕಾಂಕ್ಷೆಯುಳ್ಳ ಭಾರತದ ಈ ವರ್ತನೆಯನ್ನು ಪಾಕಿಸ್ತಾನ ಖಂಡಿಸುತ್ತದೆ ಎಂದು ಹೇಳಿದ್ದಾರೆ.

ಗಡಿಯಲ್ಲಿ ಭಾರತೀಯ ಸೇನೆಯ ವರ್ತನೆಯನ್ನು ನಿಯಂತ್ರಿಸುವಂತೆ ತಮ್ಮ ಸರ್ಕಾರಕ್ಕೆ ಅರ್ಥಮಾಡಿಸಿ. ಗಡಿಯಲ್ಲಿ ಸಾಕಷ್ಟು ಬಾರಿ ಕದನ ವಿರಾಮಗಳು ನಡೆಯುತ್ತಿದ್ದು, ಇದು ನಿಲ್ಲಬೇಕಿದೆ. ಪಾಕಿಸ್ತಾನ ನಿಯಮದಂತೆ ಹಾಗೂ ಒಪ್ಪಂದಂತೆ ನಡೆದುಕೊಳ್ಳುತ್ತಿದ್ದು. ಪಾಕಿಸ್ತಾನ ಎಂದಿಗೂ ಕದನ ವಿರಾಮವನ್ನು ಉಲ್ಲಂಘಿಸಿಲ್ಲ. ಗುಂಡಿನ ದಾಳಿ ನಡೆದಾಗ ಮಾತ್ರ ಅದಕ್ಕೆ ದಿಟ್ಟ ಉತ್ತರವನ್ನು ನೀಡುತ್ತಾ ಬಂದಿದೆ. ಇದನ್ನು ನಮ್ಮ ದೌರ್ಬಲ್ಯವೆಂದು ತೆಗೆದುಕೊಳ್ಳಬಾರದು ಎಂದು ನೋಟಿಸ್ ನಲ್ಲಿ ತಿಳಿಸಲಾಗಿದೆ ಎಂದು ಹೇಳಲಾಗುತ್ತಿದೆ.

SCROLL FOR NEXT