ಶಿಕಾಗೋ: ಸಹಪಾಠಿಯೊಬ್ಬ ಇತರೆ ವಿದ್ಯಾರ್ಥಿಗಳ ಸಮ್ಮುಖದಲ್ಲೇ ಮುಸಲ್ಮಾನ ಸಮುದಾಯದ ವಿದ್ಯಾರ್ಥಿನಿಯೊಬ್ಬಳ ಹಿಜಬ್ (ತಲೆವಸ್ತ್ರ) ಕಿತ್ತು ಬಿಸಾಡಿದ ಘಟನೆ ಅಮೆರಿಕದ ಮಿನ್ನೆಸೋಟಾದಲ್ಲಿ ನಡೆದಿದೆ. ಅಲ್ಲದೆ ವಿದ್ಯಾರ್ಥಿನಿಯ ಕೂದಲನ್ನೂ ಹಿಡಿದು ಎಳೆಯಲಾಗಿದೆ ಎಂದು ಆರೋಪಿಸಲಾಗಿದೆ.
ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಗೆಲುವು ಸಾಧಿಸಿದ ನಂತರ ಹಿಜಬ್ ಧರಿಸಿದ ಮಹಿಳೆಯರ ಮೇಲೆ ನಡೆದ ಮೊದಲ ದಾಳಿ ಇದಾಗಿದ್ದು, ಮಿನ್ನೆಸೋಟಾದ ಕೂನ್ ರ್ಯಾಪಿಡ್ಸ್ ಪ್ರದೇಶದಲ್ಲಿರುವ ನಾರ್ತೆಡಲ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ನಡೆದಿದೆ. ಘಟನೆ ಖಂಡಿಸಿ ಅಮೆರಿಕನ್ ಇಸ್ಲಾಮಿಕ್ ರಿಲೇಶನ್ಸ್ ಸಂಘಟನೆ ತನಿಖೆ ನಡೆಸುವಂತೆ ಆಗ್ರಹಿಸಿದೆ.
ಸಹಪಾಠಿಯೊಬ್ಬ ವಿದ್ಯಾರ್ಥಿನಿಯ ಹಿಂದೆಯೇ ಬಂದು ಹಿಜಬ್ ಕಿತ್ತು ಹಾಕಿದ್ದಾನೆ ಮತ್ತು ಇತರೆ ವಿದ್ಯಾರ್ಥಿಗಳ ಎದುರಿಗೆ ಅವಳ ಕೂದಲನ್ನು ಹಿಡಿದು ಎಳೆದಿದ್ದಾನೆ ಎಂದು ವಿದ್ಯಾರ್ಥಿನಿಯ ಪೋಷಕರು ಸಂಘಟನೆಗೆ ವಿಷಯ ತಿಳಿಸಿದ್ದಾರೆ ಎನ್ನಲಾಗಿದೆ.
ಈ ಘಟನೆಗೆ ಸಂಬಂಧಿಸಿದಂತೆ ಅನೊಕಾ- ಹೆನ್ನಿಪಿನ್ ಸ್ಕೂಲ್ ಡಿಸ್ಟಿಕ್ ಇದುವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ಸಂಘಟನೆ ಆರೋಪಿಸಿದೆ. ಕೂಡಲೇ ಈ ಕುರಿತು ಕಠಿಣ ಕ್ರಮಕೈಗೊಳ್ಳಬೇಕು ಮತ್ತು ವಿದ್ಯಾರ್ಥಿಗಳಿಗೆ ಉತ್ತಮ ಕಲಿಕಾ ವಾತಾವರಣ ಸೃಷ್ಟಿಸಬೇಕು ಎಂದು ಅಮೆರಿಕನ್ ಇಸ್ಲಾಮಿಕ್ ರಿಲೇಶನ್ಸ್ ಸಂಘಟನೆ ಕಾರ್ಯನಿರ್ವಾಹಕ ನಿರ್ದೇಶಕ ಹುಸೇನ್ ಹೇಳಿದ್ದಾರೆ.
ಅಮೆರಿಕ ನೂತನ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಆಯ್ಕೆಯಾಗುತ್ತಿದ್ದಂತೆಯೇ ಹಲವು ಸಂಘಟನೆಗಳು ಟ್ರಂಪ್ ಗೆಲುವು ಖಂಡಿಸಿ ಪ್ರತಿಭಟನೆಗಳನ್ನು ನಡೆಸಿದ್ದವು.