ವಿದೇಶ

ಪಾಕ್ ಸೇನಾ ಮುಖ್ಯಸ್ಥರಾಗಿ ಬಜ್ವಾ ಅಧಿಕಾರ, ಭಾರತಕ್ಕೆ ಎಚ್ಚರಿಕೆ ನೀಡಿದ ರಹೀಲ್

Lingaraj Badiger
ಇಸ್ಲಾಮಾಬಾದ್: ಪಾಕಿಸ್ತಾನ ಆಕ್ರಮಿತ ಕಾಶ್ಮೀರ ವ್ಯವಹಾರಗಳ ತಜ್ಞರಾಗಿರುವ ಜನರಲ್ ಖಮರ್ ಜಾವೇದ್ ಬಜ್ವಾ ಅವರು ಮಂಗಳವಾರ ಪಾಕಿಸ್ತಾನ ಸೇನಾ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.
 ಪಾಕ್ ಸೇನಾ ಮುಖ್ಯಸ್ಥರಾಗಿದ್ದ ಜನರಲ್ ರಹೀಲ್ ಷರೀಫ್ ಅವರ ಸೇವಾವಧಿ ಇಂದು ಅಂತ್ಯಗೊಂಡಿದ್ದು, ವಿಶ್ವದ ಆರನೇ ಅತಿ ದೊಡ್ಡ ಸೇನಾಪಡೆಯ ನೂತನ ಸಾರಥಿಯಾಗಿ ನೇಮಕಗೊಂಡಿರುವ 57 ವರ್ಷದ ಬಜ್ವಾ ಅವರಿಗೆ ಅಧಿಕಾರ ಹಸ್ತಾಂತರಿಸಿದರು.
ರಾವಲ್ಪಿಂಡಿಯ ಸೇನಾ ಹಾಕಿ ಸ್ಟೇಡಿಯಂನಲ್ಲಿ ನಡೆದ ಸಮಾರಂಭದಲ್ಲಿ ಅಧಿಕಾರ ಹಸ್ತಾಂತರಿಸಿ ವಿದಾಯ ಭಾಷಣ ಮಾಡಿದ ರಹೀಲ್, ಭಾರತ ಕಾಶ್ಮೀರ ವಿಚಾರದಲ್ಲಿ ಆಕ್ರಮಣಕಾರಿ ನಿಲುವು ತೆಗೆದುಕೊಳ್ಳುತ್ತಿದೆ. ಇತ್ತೀಚಿನ ತಿಂಗಳಲ್ಲಿ ಭಾರತ ಕಾಶ್ಮೀರದಲ್ಲಿ ಆಕ್ರಮಣಕಾರಿ ನಿಲುವು ಮತ್ತು ಭಯೋತ್ಪದಾನೆಯನ್ನು ಹೆಚ್ಚಿಸುತ್ತಿದೆ ಎಂದರು.
ಭಾರತ ನಮ್ಮ ತಾಳ್ಮೆಯ ನೀತಿಯನ್ನು ದೌರ್ಬಲ್ಯ ಎಂದು ತಪ್ಪಾಗಿ ಅರ್ಥ ಮಾಡಿಕೊಳ್ಳುತ್ತಿದ್ದು, ಇದು ತುಂಬಾ ಅಪಾಯಕಾರಿ ಎಂದು ರಹೀಲ್ ಎಚ್ಚರಿಸಿದ್ದಾರೆ.
ಇನ್ನು ಅಧಿಕಾರ ಸ್ವೀಕರಿಸಿ ಮಾತನಾಡಿದ ಬಜ್ವಾ ಅವರು, ಗಡಿ ನಿಯಂತ್ರಣ ರೇಖೆಯಲ್ಲಿನ ಉದ್ವಿಗ್ನ ಪರಿಸ್ಥಿತಿಯನ್ನು ಸುಧಾರಿಸುವುದಾಗಿ ಭರವಸೆ ನೀಡಿದ್ದಾರೆ.
ಪಾಕ್ ಪ್ರಧಾನಿ ನವಾಜ್ ಷರೀಫ್ ಅವರು ಶನಿವಾರವಷ್ಟೇ ರಹೀಲ್ ಸ್ಥಾನಕ್ಕೆ ಬಜ್ವಾ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದರು.
SCROLL FOR NEXT