ವಿದೇಶ

"ಮ್ಯಾಥ್ಯೂ" ಅಬ್ಬರಕ್ಕೆ ಅಮೆರಿಕ ತಲ್ಲಣ; 300ಕ್ಕೇರಿದ ಸಾವಿನ ಸಂಖ್ಯೆ

Srinivasamurthy VN

ಫ್ಲೋರಿಡಾ: ಮ್ಯಾಥ್ಯೂ ಅಬ್ಬರಕ್ಕೆ ವಿಶ್ವದ ದೊಡ್ಡಣ್ಣ ತಲ್ಲಣಿಸಿ ಹೋಗಿದ್ದು, ಚಂಡಮಾರುತದ ಅಬ್ಬರಕ್ಕೆ ಈ ವರೆಗೂ ಸಾವನ್ನಪ್ಪಿದವರ ಸಂಖ್ಯೆ 300ಕ್ಕೇರಿದೆ ಎಂದು ತಿಳಿದುಬಂದಿದೆ.

ದಶಕದ ಅತೀ ದೊಡ್ಡ ನೈಸರ್ಗಿಕ ವಿಕೋಪ ಎಂದು ಹೇಳಲಾಗುತ್ತಿರುವ ಮ್ಯಾಥ್ಯೂ ಚಂಡಮಾರುತದಿಂದಾಗಿ ಅಮೆರಿಕದ ಫ್ಲೋರಾಡ ಜನತೆ ಕಂಗಾಲಾಗಿದ್ದು, ಸ್ವತಃ ಸ್ಥಳೀಯ ಸರ್ಕಾರವೇ  ಮನೆಗಳನ್ನು ಬಿಟ್ಟು ಹೊರಬರದಂತೆ ಪ್ರಜೆಗಳಿಗೆ ಸೂಚನೆ ನೀಡಿದೆ. ಹೈಟಿಯಲ್ಲಿ ಚಂಡಮಾರುತದ ಅಬ್ಬರಕ್ಕೆ ನೂರಾರು ಜನ ಸಾವನ್ನಪ್ಪಿರುವಂತೆಯೇ ಪ್ರಸ್ತುತ ಮ್ಯಾಥ್ಯೂ ಚಂಡಮಾರುತ ಫ್ಲೋರಿಡಾದತ್ತ ಮುಖ ಮಾಡಿದೆ. ಅತೀ ವೇಗದಲ್ಲಿ ಬೀಸುತ್ತಿರುವ ಗಾಳಿ ಹಾಗೂ ಮಳೆಯಿಂದಾಗಿ ಫ್ಲೋರಿಡಾ ನಗರ ತತ್ತರಿಸಿ ಹೋಗಿದ್ದು, ರಸ್ತೆ, ರೈಲು ಹಾಗೂ ವಿಮಾನ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.

ಮ್ಯಾಥ್ಯೂ ಚಂಡಮಾರುತ ಹಿನ್ನಲೆಯಲ್ಲಿ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರು ಆಂತರಿಕ ತುರ್ತು ಪರಿಸ್ಥಿತಿ ಘೋಷಣೆ ಮಾಡಿದ್ದು, ಈ ಭಾಗದ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಸಮರೋಪಾದಿ ರಕ್ಷಣಾ ಕಾರ್ಯಾಚರಣೆಗೆ ಆದೇಶಿಸಲಾಗಿದ್ದು, ಕಾರ್ಯಾಚರಣೆಯಲ್ಲಿ ಅಮೆರಿಕದ ನುರಿತ ಸೇನಾಪಡೆಗಳು ಕೂಡ ಕೈ ಜೋಡಿಸಿವೆ.

ಇನ್ನು ಅಪಾಯಕಾರಿ ಪ್ರದೇಶಗಳಲ್ಲಿ ಸುಮಾರು 1.05 ಮಿಲಿಯನ್ ಜನರಿದ್ದು, ಅವರನ್ನು ಸುರಕ್ಷಿತ ಪ್ರದೇಶಗಳಿಗೆ ರವಾನಿಸಲು ಅಮೆರಿಕದ ವಿಪತ್ತು ದಳದ ಸಿಬ್ಬಂದಿ ಹರಸಾಹಸಪಡುತ್ತಿದ್ದಾರೆ.  ಪ್ರಮುಖವಾಗಿ ಕರಾವಳಿ ಭಾಗದಲ್ಲಿ ರಕ್ಷಣಾ ಕಾರ್ಯಾಚರಣೆ ಸಮರೋಪಾದಿಯಲ್ಲಿ ನಡೆಯುತ್ತಿದ್ದು, ರಕ್ಷಣಾ ಕಾರ್ಯಾಚರಣೆಯಲ್ಲಿ ಅಮೆರಿಕದ ನುರಿತ ಸೈನಿಕರು ತೊಡಗಿಸಿಕೊಂಡಿದ್ದಾರೆ. ಅತೀ ವೇಗದ ಗಾಳಿ ಸೈನಿಕರ ರಕ್ಷಣಾ ಕಾರ್ಯಾಚರಣೆಗೆ ತೊಡಕಾಗಿದ್ದು, ಪ್ರಜೆಗಳ ರಕ್ಷಣೆಗೆ ಹರಸಾಹಸಪಡಲಾಗುತ್ತಿದೆ.

ಸರ್ಕಾರಿ ಮೂಲಗಳ ಪ್ರಕಾರವೇ ಚಂಡಮಾರುತದ ಅಬ್ಬರಕ್ಕೆ ಈ ವರೆಗೂ ಸುಮಾರು 300 ಮಂದಿ ಸಾವನ್ನಪ್ಪಿದ್ದು, ದಕ್ಷಿಣ ಭಾಗದಲ್ಲಿ ಸಾವಿನ ಸಂಖ್ಯೆ ಹೆಚ್ಚಾಗಿದೆ ಎಂದು ತಿಳಿದುಬಂದಿದೆ.  ಪ್ರಮುಖವಾಗಿ ದಕ್ಷಿಣ ಮತ್ತು ಉತ್ತರ ಫ್ಲೋರಿಡಾ ಕರಾವಳಿ ಭಾಗದಲ್ಲಿ ಸಾವಿನ ಸಂಖ್ಯೆ ಹೆಚ್ಚಾಗಿದೆ ಎಂದು ತಿಳಿದುಬಂದಿದೆ.

SCROLL FOR NEXT