ಇಸ್ಲಾಮಾಬಾದ್: ಮಹತ್ತರ ಬೆಳವಣಿಗೆಯೊಂದರಲ್ಲಿ ಜಿಹಾದಿ ಮೂಲಭೂತವಾದಿಗಳ ಸ್ವರ್ಗ ಪಾಕಿಸ್ತಾನದಲ್ಲಿ ಮರ್ಯಾದಾ ಹತ್ಯೆ ವಿರೋಧಿ ಹಾಗೂ ಅತ್ಯಾಚಾರ ವಿರೋಧ ಕಾಯ್ದೆಯನ್ನು ಗುರುವಾರ ಜಾರಿಗೆ ತರಲಾಗಿದೆ.
ಪಾಕಿಸ್ತಾನ ಸಂಸತ್ತಿನಲ್ಲಿ ನಿನ್ನೆ ನಡೆದ ಕಲಾಪದಲ್ಲಿ ಈ ಎರಡು ಪ್ರಮುಖ ಕಾಯ್ದೆಗಳಿಗೆ ಅನುಮೋದನೆ ನೀಡಲಾಗಿದೆ. ಪಾಕಿಸ್ತಾನ ಪೀಪಲ್ಸ್ ಪಾರ್ಟಿ ಸೆನೆಟರ್ ಫರಾತುಲ್ಲಾ ಬಾಬರ್ ಅವರು, ಕಾಯ್ದೆ ಅವಿರೋಧವಾಗಿ ಅನುಮೋದನೆ ಪಡೆದಿದೆ ಎಂದು ಘೋಷಿಸಿದರು.
ನೂತನ ಕಾಯ್ದೆಗಳ ಅನ್ವಯ ಸಾಮಾನ್ಯ ಕೊಲೆ ಪ್ರಕರಣದ ಆರೋಪಿಗೆ ನೀಡಲಾಗುವ ಶಿಕ್ಷೆಗಿಂತಲೂ ಅಧಿಕ ಪ್ರಮಾಣದ ಶಿಕ್ಷೆಯನ್ನು ಮರ್ಯಾದಾ ಹತ್ಯೆ ಆರೋಪಿಗೆ ನೀಡುವ ಅವಕಾಶವನ್ನು ನೂತನ ಕಾಯ್ದೆ ಕಲ್ಪಿಸಿದೆ. ಒಂದು ವೇಳೆ ಪ್ರಕರಣ ಸಂಬಂಧ ಆತ ಕಠಿಣ ಶಿಕ್ಷೆಗೆ (ಮರಣ ದಂಡನೆ) ಗುರಿಯಾಗಿದ್ದರೆ ಆತನನ್ನು ಕ್ಷ ಮಿಸುವ ಅಧಿಕಾರ ಸಂತ್ರಸ್ತರ ಕುಟುಂಬಕ್ಕೆ ಮಾತ್ರ ನೀಡಲಾಗಿದ್ದು, ಕುಟುಂಬ ಕ್ಷಮಿಸಿದರೆ ಆತನ ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯಾಗಿ ಬದಲಿಸಬಹುದಾಗಿದೆ.
ಇನ್ನು ಅತ್ಯಾಚಾರ ವಿರೋಧಿ ಕಾಯ್ದೆಯ ಪ್ರಕಾರ ಯಾವುದೇ ರೀತಿಯ ಅತ್ಯಾಚಾರ ಪ್ರಕರಣವಾಗಿದ್ದರೂ 3 ತಿಂಗಳೊಳಗೆ ವಿಚಾರಣೆ ಮುಕ್ತಾಯವಾಗಿ ತೀರ್ಪು ಘೋಷಣೆಯಾಗಬೇಕು. ತೀರ್ಪಿನ ವಿರುದ್ಧ 6 ತಿಂಗಳೊಳಗೆ ಮಾತ್ರ ಮೇಲ್ಮನವಿ ಸಲ್ಲಿಸಬಹುದಾಗಿದೆ. ಅಂತೆಯೇ ಪ್ರಕರಣದಲ್ಲಿ ಸಂತ್ರಸ್ಥೆಯೊಂದಿಗೆ ಆರೋಪಿಗೂ ವೈದ್ಯಕೀಯ ಪರೀಕ್ಷೆಯಾಗಬೇಕು ಎಂಬ ಕಾನೂನು ಸೇರಿಸಲಾಗಿದೆ. ಅಂತೆಯೇ ಸಂತ್ರಸ್ಥರ ಕುಟುಂಬಕ್ಕೆ ಕಾನೂನಿನ ಹಕ್ಕುಗಳ ಬಗ್ಗೆ ಸಂಬಂಧ ಪಟ್ಟ ಠಾಣಾಧಿಕಾರಿಗಳೇ ಮಾಹಿತಿ ನೀಡಬೇಕು ಎಂದು ಕಾನೂನು ಮಾಡಲಾಗಿದೆ.
ವಿಶೇಷ ಪ್ರಕರಣಗಳಾದ ಅಪ್ರಾಪ್ತರ ಅತ್ಯಾಚಾರ, ಮಾನಸಿಕ ಹಾಗೂ ದೈಹಿಕ ನ್ಯೂನ್ಯತೆಗಳ್ಳುಳ್ಳವರ ಮೇಲಿನ ಅತ್ಯಾಚಾರಕ್ಕೂ ಕಠಿಣ ಶಿಕ್ಷೆ ವಿಧಿಸಬಹುದಾಗಿದೆ ಎಂದು ಬಾಬರ್ ತಿಳಿಸಿದ್ದಾರೆ.
ಒಟ್ಟಾರೆ ಜಿಹಾದಿಗಳ ಪಾಲಿನ ಸ್ವರ್ಗವಾಗಿರುವ ಪಾಕಿಸ್ತಾನದಲ್ಲಿ ಪಾಕ್ ಸಂಸತ್ತಿನ ನೂತನ ಕಾಯ್ದೆಗಳು ಎಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.