ಕಾಬುಲ್: ಇತ್ತ ಕಾಶ್ಮೀರದಲ್ಲಿ ಉಗ್ರರು ತಮ್ಮ ದಾಳಿ ಮುಂದುವರೆಸಿರುವಂತೆಯೇ ಅತ್ತ ಅಪ್ಘಾನಿಸ್ಥಾನ ರಾಜಧಾನಿ ಕಾಬೂಲ್ ನಲ್ಲಿ ಉಗ್ರರು ಅಟ್ಟಹಾಸ ಗೈದು 14 ಮಂದಿ ಸಾವಿಗೆ ಕಾರಣರಾಗಿದ್ದಾರೆ.
ಶಿಯಾ ಮುಸ್ಲಿಮರ ಪವಿತ್ರ ಅಶುರಾ ಆಚರಣೆಗಾಗಿ ಪ್ರಾರ್ಥನೆ ಸಲ್ಲಿಸಲು ಮಸೀದಿಗೆ ಆಗಮಿಸಿದ್ದ ಸಾವಿರಾರು ಮಂದಿಯ ಮೇಲೆ ಉಗ್ರಗಾಮಿಗಳು ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ. ಪರಿಣಾಮ ಸುಮಾರು 14 ಮಂದಿ ಸಾವನ್ನಪ್ಪಿ, 36ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಕಾಬುಲ್ ವಿಶ್ವವಿದ್ಯಾಲಯದ ಸಮೀಪದಲ್ಲೇ ಇರುವ ಕರ್ತೆ ಸಖಿ ಮಸೀದಿಯಲ್ಲಿ ಈ ದುರಂತ ನಡೆದಿದ್ದು, ಪ್ರಾರ್ಥನೆ ನಡೆಸುತ್ತಿದ್ದ ಸಂದರ್ಭದಲ್ಲೇ ಉಗ್ರರು ಗುಂಡು ಹಾರಿಸಲು ಆರಂಭಿಸಿದ್ದಾರೆ.
ಎಲ್ಲರೂ ಪ್ರಾರ್ಥನೆಯಲ್ಲಿ ಮಗ್ನರಾಗಿದ್ದ ಕಾರಣ ಸಾವಿನ ಸಂಖ್ಯೆ ಹೆಚ್ಚಾಗಿದೆ ಎಂದು ಆಫ್ಘಾನಿಸ್ತಾನ ಆಂತರಿಕ ಸಚಿವ ಸೆದಿಕ್ ಸೆದ್ದಿಕಿ ಹೇಳಿದ್ದಾರೆ. ಪ್ರಸ್ತುತ ಘಟನಾ ಸ್ಥಳಕ್ಕೆ ಪೊಲೀಸರು ಹಾಗೂ ಭದ್ರತಾ ಪಡೆಗಳು ಆಗಮಿಸಿದ್ದು, ದಾಳಿಕೋರರಿಗಾಗಿ ಶೋಧ ನಡೆಸುತ್ತಿದ್ದಾರೆ. ದಾಳಿ ವೇಳೆ ಮಸೀದಿಯೊಳಗೆ ಗ್ರೆನೇಡ್ ಹಾಗೂ ಬಾಂಬ್ ಸ್ಫೋಟ ಕೂಡ ಸಂಭವಿಸಿದ್ದು, ಪ್ರಾರ್ಥನೆಗೆ ಆಗಮಿಸಿದ್ದ ಜನರ ನಡುವಲ್ಲೇ ಉಗ್ರರು ತಪ್ಪಿಸಿಕೊಂಡಿರುವ ಶಂಕೆ ಇದೆ. ಜನರನ್ನು ಅಲ್ಲಿಂದ ತೆರವುಗೊಳಿಸಲಾಗುತ್ತಿದ್ದು, ಉಗ್ರರು ತಪ್ಪಿಸಿಕೊಳ್ಳದಂತೆ ಭದ್ರತಾ ಪಡೆಗಳು ತೀವ್ರ ಕಟ್ಟೆಚ್ಚರವಹಿಸಿದ್ದಾರೆ.
ಅಂತೆಯೇ ಕಾರ್ಯಾಚರಣೆಯಲ್ಲಿ 2 ಜೀವಂತ ಗ್ರೆನೇಡ್ ಗಳು ದೊರೆತಿದ್ದು, ಪ್ರಸ್ತುತ ಅವುಗಳನ್ನು ಭದ್ರತಾಪಡೆಗಳು ನಿಷ್ಕ್ರಿಯಗೊಳಿಸಿವೆ.
ಇನ್ನು ಘಟನೆಯನ್ನು ಆಫ್ಘಾನಿಸ್ತಾನ ಅಧ್ಯಕ್ಷ ಅಶ್ರಫ್ ಘನಿ ಅವರು ಖಂಡಿಸಿದ್ದು, ಇದು ಪ್ರಜಾಪ್ರಭುತ್ವದ ಮೇಲಿನ ಹಾಗೂ ಮಾನವೀಯತೆಯ ಮೇಲಿನ ದಾಳಿ ಎಂದು ಖಂಡಿಸಿದ್ದಾರೆ. ಅಂತೆಯೇ ಅಶುರಾ ಆಚರಣೆಯಲ್ಲಿರುವ ಶಿಯಾ ಮುಸ್ಲಿಮರಿಗೆ ತಮ್ಮ ಸರ್ಕಾರ ಸಂಪೂರ್ಣ ಭದ್ರತೆ ಒದಗಿಸಲಿದೆ ಎಂದೂ ಇದೇ ವೇಳೆ ಭರವಸೆ ನೀಡಿದ್ದಾರೆ.