ವಾಷಿಂಗ್ಟನ್: ಪಾಕಿಸ್ತಾನ ಉಗ್ರರ ಸ್ವರ್ಗವಾಗುತ್ತಿದ್ದು, ಮೊದಲು ತನ್ನ ನೆಲದ ಉಗ್ರ ಸಂಘಟನೆಗಳನ್ನು ಅಲ್ಲಿನ ಸರ್ಕಾರ ಮಟ್ಟ ಹಾಕಬೇಕು ಎಂದು ಅಮೆರಿಕ ಎಚ್ಚರಿಕೆ ನೀಡಿದೆ.
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಅಮೆರಿಕದ ವಿದೇಶಾಂಗ ಸಚಿವಾಲಯದ ಉಪ ವಕ್ತಾರ ಮಾರ್ಕ್ ಟೋನರ್ ಅವರು, ಉಗ್ರಗಾಮಿ ಸಂಘಟನೆಗಳಿಗೆ ಪಾಕಿಸ್ತಾನ ಸ್ವರ್ಗವಾಗಿ ಪರಿಣಮಿಸುತ್ತಿದೆ. ಪಾಕಿಸ್ತಾನ ದೇಶವೇ ಭಯೋತ್ಪಾದಕ ಕೃತ್ಯಗಳಿಂದ ತೀವ್ರವಾಗಿ ನಲುಗುತ್ತಿದೆ. ಈ ಮಾತು ಸತ್ಯವೇ ಆದರೂ ತನ್ನ ನೆಲದಲ್ಲಿನ ಉಗ್ರಗಾಮಿಗಳನ್ನು ಮಟ್ಟ ಹಾಕುವ ಪಾಕಿಸ್ತಾನ ಸರ್ಕಾರದ ಪ್ರಯತ್ನ ಸಾಲುತ್ತಿಲ್ಲ. ಮೊದಲು ಉಗ್ರ ಸಂಘಟನೆಗಳನ್ನು ಕಾನೂನು ಬಾಹಿರ ಎಂದು ಪಾಕಿಸ್ತಾನ ಸರ್ಕಾರ ಘೋಷಿಸಬೇಕು. ಬಳಿಕ ಪಾಕಿಸ್ತಾನದಲ್ಲಿ ತಮ್ಮ ಸುರಕ್ಷಿತ ತಾಣಗಳನ್ನು ಕಂಡುಕೊಳ್ಳುತ್ತಿರುವ ಉಗ್ರರನ್ನು ಕಾರ್ಯಾಚರಣೆ ಮೂಲಕ ಮಟ್ಟಹಾಕಬೇಕು ಎಂದು ಹೇಳಿದ್ದಾರೆ.
"ಪಾಕಿಸ್ತಾನದಲ್ಲಿ ಉಗ್ರರು ತಮ್ಮ ಸುರಕ್ಷಿತ ತಾಣಗಳನ್ನು ಕಂಡುಕೊಳ್ಳುತ್ತಿದ್ದಾರೆ. ಉಗ್ರರ ವಿರುದ್ಧ ಪಾಕಿಸ್ತಾನ ಸರ್ಕಾರ ಕಾರ್ಯಾಚರಣೆ ನಡೆಸುತ್ತಿದೆಯಾದರೂ, ಇದು ಪರಿಣಾಮಕಾರಿಯಾಗಿ ನಡೆಯುತ್ತಿಲ್ಲ. ಹೀಗಾಗಿ ಉಗ್ರ ಸಂಘಟನೆಗಳನ್ನು ಮಟ್ಟ ಹಾಕಲೇಬೇಕಾದ ಕಾನೂನು ಸಮ್ಮತ ಹೊಣೆಗಾರಿಕೆಯನ್ನು ಪಾಕಿಸ್ತಾನ ಹೊಂದಿದ್ದು, ತನ್ನಲ್ಲಿನ ಉಗ್ರರನ್ನು ಇನ್ನಾದರೂ ಮಟ್ಟಹಾಕಲೇಬೇಕು ಮತ್ತು ಆ ಉಗ್ರರ ಸಂಘಟನೆಗಳನ್ನು ಕಾನೂನು ಬಾಹಿರವೆಂದು ಘೋಷಿಸಿ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಮಾರ್ಕ್ ಟೋನರ್ ಹೇಳಿದ್ದಾರೆ.
19 ಭಾರತೀಯ ಯೋಧರ ಸಾವಿಗೆ ಕಾರಣವಾದ ಉರಿ ಉಗ್ರ ದಾಳಿ ಪ್ರಕರಣದ ಬಳಿಕ ಪಾಕಿಸ್ತಾನ ಹಾಗೂ ಭಾರತದ ನಡುವಿನ ಸಂಬಂಧ ತೀರಾ ಹಳಸಿದೆ. ಇನ್ನು ಇದರ ಬೆನ್ನಲ್ಲೇ ಭಾರತೀಯ ಸೇನೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ನಡೆಸಿದ ಸೀಮಿತ ದಾಳಿ ಬಳಿಕವಂತೂ ಇಂಡೋ-ಪಾಕ್ ಗಡಿ ಮತ್ತಷ್ಟು ಉದ್ವಿಗ್ನವಾಗಿದ್ದು, ಪ್ರತಿ ನಿತ್ಯ ಭಾರತದ ಮೇಲೆ ದಂಡೆತ್ತಿ ಬರುವ ಉಗ್ರರು ಮತ್ತು ಅವರನ್ನು ಸದೆ ಬಡಿಯಲು ಭಾರತೀಯ ಸೇನಾ ಕಾರ್ಯಾಚರಣೆ ಸಾಮಾನ್ಯವಾಗಿ ಹೋಗಿದೆ.
ಈ ನಡುವೆ ಭಾರತ ಕೂಡ ಪಾಕಿಸ್ತಾನದ ವಿರುದ್ಧ ಕೆಂಗಣ್ಣು ಬೀರಿದ್ದು, ವಿಶ್ವ ಸಮುದಾಯದ ಎದುರು ಪಾಕಿಸ್ತಾನವನ್ನು ಮೂಲೆಗುಂಪಾಗಿಸಲು ಪ್ರಯತ್ನಿಸುತ್ತಿದೆ. ಇದರ ಮೊದಲ ಭಾಗವಾಗಿ ಇಸ್ಲಾಮಾಬಾದ್ ನಲ್ಲಿ ಆಯೋಜನೆಯಾಗಿದ್ದ ಸಾರ್ಕ್ ಶೃಂಗಸಭೆಯನ್ನು ಭಾರತ ಬಹಿಷ್ಕರಿಸಿತ್ತು. ಭಾರತದ ಬಹಿಷ್ಕಾರದ ಬೆನ್ನಲ್ಲೇ ನೇಪಾಳ, ಬಾಂಗ್ಲಾದೇಶ, ಅಫ್ಘಾನಿಸ್ತಾನ, ಭೂತಾನ್ ದೇಶಗಳು ಕೂಡ ಶೃಂಗಸಭೆಯನ್ನು ಬಹಿಷ್ಕರಿಸಿದ್ದವು. ಆ ಮೂಲಕ ಭಾರತ ಮೊದಲ ಯಶಸ್ಸು ಸಾಧಿಸಿತ್ತು.