ವಿಶ್ವದ ಅತಿ ತೂಕದ ಮಹಿಳೆ ಈಜಿಪ್ಟ್ ನ ಇಮಾನ್ ಅಹ್ಮದ್
ಕೈರೋ: ಈಜಿಪ್ಟಿನ ಈ ಮಹಿಳೆಯನ್ನು ವಿಶ್ವದಲ್ಲಿಯೇ ಅತಿ ಸ್ಥೂಲಕಾಯ ಮಹಿಳೆ ಎಂದು ಗುರುತಿಸಲಾಗಿದೆ. ಈಕೆಯ ತೂಕ ಬರೋಬ್ಬರಿ 500 ಕೆ.ಜಿ.
36 ವರ್ಷದ ಇಮಾನ್ ಅಹ್ಮದ್ ಅಬ್ದುಲಾತಿ ಬರೋಬ್ಬರಿ 500 ಕೆ.ಜಿ. ತೂಕವಿದ್ದಾರೆ. ತಮ್ಮ ಸ್ಥೂಲಕಾಯದ ಸಮಸ್ಯೆಯಿಂದಾಗಿ ಅವರು ಕಳೆದ 25 ವರ್ಷಗಳಿಂದ ಹಾಸಿಗೆಯನ್ನು ಬಿಟ್ಟು ಮೇಲೆ ಏಳಲು ಸಾಧ್ಯವಾಗುತ್ತಿಲ್ಲ ಮತ್ತು ಕುಳಿತಲ್ಲಿಂದ ಆಚೀಚೆ ಕದಲಲು ಸಾಧ್ಯವಾಗುತ್ತಿಲ್ಲ ಎಂದು ಡೈಲಿ ಮೇಲ್ ಎಂಬ ಮಾಧ್ಯಮ ವರದಿ ಮಾಡಿದೆ.
ಆಕೆಯ ಪ್ರತಿನಿತ್ಯದ ಕೆಲಸಗಳಿಗೆ ಮನೆಯವರನ್ನು ನಂಬುವಂತಾಗಿದೆ. ಆಕೆಯ ಸೋದರಿ ಚಾಯ್ ಮಾ ಅಬ್ದುಲಾತಿಯೇ ಇಮಾಮ್ ಗೆ ತಿನ್ನಿಸುವುದು, ಬಟ್ಟೆ ಬದಲಾಯಿಸುವುದು, ಸ್ವಚ್ಛಗೊಳಿಸುವುದು ಇತ್ಯಾದಿಗಳನ್ನು ಮಾಡಬೇಕಾಗಿದೆ.
ಹುಟ್ಟುವಾಗ 5 ಕೆಜಿ ತೂಕ ಹೊಂದಿದ್ದ ಇಮಾಮ್ ಗೆ ಎಲಿಫಾಂಟಿಯಾಸಿಸ್ - ಅಂಗಗಳು ಊತ ಕಾಣಿಸಿಕೊಳ್ಳುವ ಕಾಯಿಲೆಯಿದ್ದು ಪರಾವಲಂಬಿಜೀವಿ ಸೋಂಕಿನಿಂದಾಗಿ ಹೀಗೆ ಊದಿಕೊಂಡಿದ್ದಾಳೆ. ಗ್ರಂಥಿಗಳ ತೊಂದರೆಯಿಂದಾಗಿ ಆಕೆಯ ಶರೀರದಲ್ಲಿ ಅಗತ್ಯಕ್ಕಿಂತ ಹೆಚ್ಚು ನೀರು ಸಂಗ್ರಹಣೆಯಾಗಿದೆ ಎಂದು ವೈದ್ಯರು ಹೇಳಿದ್ದಾರೆ.
ಮಗುವಾಗಿದ್ದಾಗ ಇಮಾಮ್ ತನ್ನ ಕೈಯನ್ನು ನೆಲಕ್ಕೂರಿ ಮೇಲೇಳುತ್ತಿದ್ದಳಂತೆ. 11 ವರ್ಷವಾಗುವ ಹೊತ್ತಿಗೆ ಆಕೆಯ ದೇಹದ ತೂಕ ಹೆಚ್ಚಾಗಿ ಕೈಯೂರಿ ಮೇಲೇಳಲು ಸಾಧ್ಯವಾಗುತ್ತಿರಲಿಲ್ಲವಂತೆ. ಆಗ ಮನೆಯಲ್ಲಿ ತೆವಳಿಕೊಂಡು ಓಡಾಡಲು ಆರಂಭಿಸಿದಳು. ಶಾಲೆಗೆ ಹೋಗುತ್ತಿದ್ದಾಗ ಸೆರೆಬ್ರಲ್ ಸ್ಟ್ರಾಕ್ ಆಗಿ ಶಾಲೆ ಬಿಡಬೇಕಾಗಿ ಬಂತು. ಮನೆಯಲ್ಲಿ ಹಾಸಿಗೆಯಲ್ಲಿಯೇ ಕಾಲ ಕಳೆಯುವಂತಾಯಿತು. ಅಂದಿನಿಂದ ಇಲ್ಲಿಯವರೆಗೆ ಇಮಾಮ್ ತನ್ನ ಕೋಣೆ ಬಿಟ್ಟು ಕದಲಿಲ್ಲ.
ಆಕೆಗೆ ವೈದ್ಯಕೀಯ ಚಿಕಿತ್ಸೆ ಕೊಡಿಸಲು ಕುಟುಂಬದವರು ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತ್ಹಾ ಎಲ್-ಸಿಸಿ ಅವರಿಗೆ ಮನವಿ ಮಾಡಿಕೊಂಡಿದ್ದಾರೆ.