ಬೀಜಿಂಗ್: ಕಾಶ್ಮೀರ ವಿಚಾರದಲ್ಲಿ ಪಾಕಿಸ್ತಾನಕ್ಕೆ ಬೆಂಬಲ ಘೋಷಿಸಿದ್ದ ಚೀನಾ ಪ್ರೀಮಿಯರ್ ಲಿ ಕಿಕ್ವ್ಯಾಂಗ್ ಹೇಳಿಕೆಯಿಂದ ಚೀನಾ ಅಂತರ ಕಾಯ್ದುಕೊಂಡಿದೆ.
ಯುಎನ್ ಜಿ ಎ ಸಭೆಯಲ್ಲಿ ಪಾಕ್ ಪ್ರಧಾನಿ ನವಾಜ್ ಷರೀಫ್ ಅವರೊಂದಿಗೆ ಮಾತುಕತೆ ನಡೆಸಿದ ಬಳಿಕ ಚೀನಾ ಪ್ರೀಮಿಯರ್ ಲಿ ಕಿಕ್ವ್ಯಾಂಗ್ ಕಾಶ್ಮೀರ ವಿಷಯದಲ್ಲಿ ಪಾಕಿಸ್ತಾನಕ್ಕೆ ಚೀನಾ ಬೆಂಬಲ ನೀಡುವುದಾಗಿ ಘೋಷಿಸಿ ಹೇಳಿಕೆ ನೀಡಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಚೀನಾ ವಿದೇಶಾಂಗ ಇಲಾಖೆ ವಕ್ತಾರ ಲು ಕಾಂಗ್, ಕಾಶ್ಮೀರದ ವಿಚಾರವಾಗಿ ಸಂಬಂಧಪಟ್ಟ ರಾಷ್ಟ್ರಗಳು ಶಾಂತಿಯುತವಾಗಿ ಇತ್ಯರ್ಥಗೊಳಿಸಲಿ ಎಂಬುದು ಚೀನಾದ ನಿಲುವಾಗಿದೆ ಎಂದು ಹೇಳಿದ್ದಾರೆ.
ಕಾಶ್ಮೀರದಲ್ಲಿ ಉಂಟಾಗಿರುವ ಪ್ರಕ್ಷುಬ್ಧ ವಾತಾವರಣದ ಬಗ್ಗೆ ಚೀನಾಗೆ ಆತಂಕವಿದೆ ಎಂದಷ್ಟೇ ಹೇಳಿರುವ ವಿದೇಶಾಂಗ ಇಲಾಖೆ ವಕ್ತಾರ, ಕಾಶ್ಮೀರ ವಿವಾದಕ್ಕೆ ಸಂಬಂಧಿಸಿದ ರಾಷ್ಟ್ರಗಳು ಪ್ರಾದೇಶಿಕವಾಗಿ ಶಾಂತಿ ನೆಲೆಸುವ ನಿಟ್ಟಿನಲ್ಲಿ ವಿವಾದವನ್ನು ಇತ್ಯರ್ಥಗೊಳಿಸುತ್ತವೆ ಎಂಬ ವಿಶ್ವಾಸವಿದೆ ಎಂದು ಹೇಳಿದ್ದಾರೆ. ಆದರೆ ಚೀನಾ ಪ್ರೀಮಿಯರ್ ಲಿ ಕಿಕ್ವ್ಯಾಂಗ್ ಅವರ ಹೇಳಿಕೆಯನ್ನು ಬೆಂಬಲಿಸದೆ ಇರುವುದು ಗಮನಾರ್ಹ ವಿಷಯವಾಗಿದೆ.
ಪಾಕ್ ಪ್ರಧಾನಿ ನವಾಜ್ ಷರೀಫ್- ಚೀನಾ ಪ್ರೀಮಿಯರ್ ಲಿ ಕಿಕ್ವ್ಯಾಂಗ್ ಭೇಟಿ ಬಳಿಕ ವರದಿ ಪ್ರಕಟಿಸಿದ್ದ ಕೆಲವು ಪಾಕಿಸ್ತಾನ ಮಾಧ್ಯಮಗಳು, ಚೀನಾ ಪ್ರೀಮಿಯರ್ ಕಾಶ್ಮೀರ ವಿಚಾರದಲ್ಲಿ ಪಾಕಿಸ್ತಾನಕ್ಕೆ ಬೆಂಬಲ ಘೋಷಿಸಿದ್ದಾರೆ ಎಂದು ವರದಿ ಮಾಡಿದ್ದವು.