ಬಾಗ್ದಾದ್: ಹಿಂಸಾಚಾರ ಪೀಡಿತ ಇರಾಕ್ ನಲ್ಲಿ ಇಸ್ಲಾಮಿಕ್ ಸ್ಟೇಟ್ ಉಗ್ರರ ಹಾವಳಿ ಮುಂದುವರೆದಿದ್ದು, ಶನಿವಾರ ರಾಜಧಾನಿ ಬಾಗ್ದಾದ್ ಸಮೀಪದ ಟಿಕ್ರಿತ್ ನಗರದಲ್ಲಿ ಉಗ್ರರು ನಡೆಸಿದ ದಾಳಿಯಲ್ಲಿ ಸಾವನ್ನಪ್ಪಿದವರ ಸಂಖ್ಯೆ 18ಕ್ಕೇರಿದೆ.
ಸಲಾಹುದ್ದೀನ್ ಪ್ರಾಂತ್ಯದಲ್ಲಿ ನಿನ್ನೆ ಉಗ್ರರ ನಡೆಸಿದ ತ್ರಿವಳಿ ಆತ್ಮಾಹುತಿ ದಾಳಿಯಲ್ಲಿ ಇಬ್ಬರು ಮಕ್ಕಳು ಹಾಗೂ 5 ಯೋಧರು ಸೇರಿದಂತೆ ಒಟ್ಟು 18 ಮಂದಿ ಸಾವಿಗೀಡಾಗಿದ್ದಾರೆ ಎಂದು ತಿಳಿದುಬಂದಿದೆ. ಟಿಕ್ರಿತ್ ನಗರದ ಚೆಕ್ ಪಾಯಿಂಟ್ ಬಳಿ ಉಗ್ರರು ದಾಳಿ ನಡೆಸಿದ್ದು, ಮಿತ್ರಪಡೆಗಳ ಪ್ರತಿದಾಳಿ ಆರಂಭವಾಗುತ್ತಿದ್ದಂತೆಯೇ ಬಾಂಬ್ ದಾಳಿ ನಡೆಸಿದ್ದಾರೆ. ಜೀಪ್ ನಲ್ಲಿ ಬಂದ ಉಗ್ರರು ನೋಡ ನೋಡುತ್ತಿದ್ದಂತೆಯೇ ಜೀಪ್ ಅನ್ನು ಸೇನಾ ನೆಲೆಯೊಳಗೆ ನುಗ್ಗಿಸಿ ಸ್ಫೋಟಿಸಿದ್ದಾರೆ.
ಬಳಿಕ ನಡೆದ ಗುಂಡಿನ ಚಕಮಕಿಯಲ್ಲಿ ಓರ್ವ ಉಗ್ರನನ್ನು ಇರಾಕ್ ಪಡೆಗಳು ಹೊಡೆದುರುಳಿಸಿವೆ. ದಾಳಿಯಲ್ಲಿ ಈ ವರೆಗೂ 21 ಮಂದಿ ಗಾಯಗೊಂಡಿದ್ದಾರೆ. ಇನ್ನು ದಾಳಿ ಸಂಬಂಧ ಇರಾಕ್ ಪೊಲೀಸರು ಹಲವು ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಉತ್ತರ ಬಾಗ್ದಾದ್ ಮೂಲಕ ನಗರ ಪ್ರವೇಶ ಮಾಡಿದ ಮೂವರು ಆತ್ಮಹತ್ಯಾ ದಳದ ಉಗ್ರರು, ಅಲ್ ಸಲಾಂ ಪಟ್ಟಣದಲ್ಲಿ ಸೈನಿಕ ಚೆಕ್ ಪಾಯಿಂಟ್ ಬಳಿ ತಮ್ಮನ್ನು ತಾವು ಸ್ಪೋಟಿಸಿಕೊಂಡಿದ್ದಾರೆ. ಘಟನೆಯಲ್ಲಿ ಚೆಕ್ ಪಾಯಿಂಟ್ ನಲ್ಲಿದ್ದ 11 ಸೈನಿಕರು ಸಾವನ್ನಪ್ಪಿದ್ದು, 34 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಸಲಾಹುದ್ದೀನ್ ಪ್ರಾಂತ್ಯದ ಪೊಲೀಸ್ ವರಿಷ್ಠಾಧಿಕಾರಿ ಮಹಮದ್ ಅಲ್ ಜಬೌರಿ ಅವರು, ಸ್ಫೋಟಕ ತುಂಬಿದ್ದ ವಾಹನದೊಂದಿಗೆ ನುಗ್ಗಿದ ಮೂರು ಆತ್ಮಹತ್ಯಾದಳದ ಉಗ್ರರು, ಏಕಾಏಕಿ ಸೈನಿಕರಿದ್ದ ಚೆಕ್ ಪಾಯಿಂಟ್ ಗೆ ವಾಹನ ನುಗ್ಗಿಸಿ ಸ್ಫೋಟಿಸಿದ್ದಾರೆ ಎಂದು ಹೇಳಿದ್ದಾರೆ.