ವಿಶ್ವಸಂಸ್ಥೆ: ಉಗ್ರರ ದಾಳಿ ಮೂಲಕ ಕಾಶ್ಮೀರವನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳಬಹುದೆಂದು ಪಾಕಿಸ್ತಾನ ಕನಸು ಕಾಣುತ್ತಿದ್ದರೆ, ಅದು ಎಂದಿಗೂ ನನಸಾಗಲು ಸಾಧ್ಯವಿಲ್ಲ. ಭಾರತದಿಂದ ಪಾಕಿಸ್ತಾನ ಎಂದಿಗೂ ಕಾಶ್ಮೀರವನ್ನು ಕಿತ್ತುಕೊಳ್ಳಲು ಸಾಧ್ಯವಿಲ್ಲ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಹೇಳಿದ್ದಾರೆ.
ವಿಶ್ವಸಂಸ್ಥೆ 71ನೇ ಮಹಾಧಿವೇಶನದಲ್ಲಿ ಮಾತನಾಡಿರುವ ಸುಷ್ಮಾ ಸ್ವರಾಜ್ ಅವರು ಪಾಕಿಸ್ತಾನ ನಡೆಯ ವಿರುದ್ಧ ಕಿಡಿಕಾರಿದ್ದಾರೆ.
ಉಗ್ರರ ದಾಳಿ ಮೂಲಕ ಕಾಶ್ಮೀರವನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳಬಹುದೆಂದು ಪಾಕಿಸ್ತಾನ ಚಿಂತಿಸುತ್ತಿದ್ದರೆ. ಅದು ತಪ್ಪು. ಪಾಕಿಸ್ತಾನ ಭಾರತದಿಂದ ಕಾಶ್ಮೀರವನ್ನು ಎಂದಿಗೂ ಕಿತ್ತುಕೊಳ್ಳಲು ಸಾಧ್ಯವಿಲ್ಲ. ಪಾಕಿಸ್ತಾನಕ್ಕೆ ಒಂದು ಸಲಹೆ ನೀಡಲು ಇಚ್ಛಿಸುತ್ತೇನೆ. ಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಿದ್ದು, ಕಾಶ್ಮೀರವನ್ನು ತಮ್ಮದಾಗಿಸಿಕೊಳ್ಳುವ ಕನಸ್ಸನ್ನು ಪಾಕಿಸ್ತಾನ ಕಾಣುತ್ತಿದ್ದರೆ, ಅದನ್ನು ಈ ಕೂಡಲೇ ಬಿಡಲಿ ಎಂದಿದ್ದಾರೆ.
ಭಯೋತ್ಪಾದನೆ ಇಂದು ಇಡೀ ವಿಶ್ವಕ್ಕೆ ತಲೆನೋವಾಗಿ ಪರಿಣಮಿಸಿದ್ದು, ಭಯೋತ್ಪಾದನೆ ವಿರುದ್ಧ ವಿಶ್ವ ಒಂದಾಗಬೇಕಿದೆ. ಭಯೋತ್ಪಾದಕರಿಗೆ ಸ್ವಂತವಾಗಿ ಬ್ಯಾಂಕ್ ಖಾತೆ ಮತ್ತು ಶಸ್ತ್ರಾಸ್ತ್ರಗಳಿಲ್ಲ. ಹಾಗೆಂದ ಮೇಲೆ ಅವರಿಗೆ ಯಾರು ಸೌಲಭ್ಯಗಳನ್ನು ನೀಡುತ್ತಿದ್ದಾರೆ. ಗಾಜಿನ ಮನೆಯಲ್ಲಿ ಜೀವನ ನಡೆಸುತ್ತಿರುವವರು ಇತರರ ಮೇಲೆ ಕಲ್ಲನ್ನು ಎಸೆಯಬಾರದು.
ಪಾಕಿಸ್ತಾನದೊಂದಿಗೆ ಉತ್ತಮ ಸಂಬಂಧ ಹೊಂದಲು ಭಾರತ ಬಯಸಿತ್ತು. ಸ್ನೇಹದ ಆಧಾರದ ಮೇಲೆ ಕೆಲ ನಿಯಮಗಳೊಂದಿಗೆ ಎರಡು ದೇಶಗಳ ನಡುವಿನ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಇಚ್ಛಿಸಿತ್ತು. ಆದರೆ, ಇದಕ್ಕೆ ಬದಲಾಗಿ ಪಾಕಿಸ್ತಾನದಿಂದ ಉರಿ ಹಾಗೂ ಪಠಾಣ್ ಕೋಟ್ ನಂತಹ ದಾಳಿಗಳು ಭಾರತಕ್ಕೆ ಸಿಕ್ಕಿತು. ಪಾಕಿಸ್ತಾನ ಗಡಿಯಲ್ಲಿ ನುಸುಳಲು ಯತ್ನಿಸುತ್ತಿದೆ ಎಂಬುದಕ್ಕೆ ಬಂಧಿತನಾಗಿರುವ ಬಹದ್ದೂರ್ ಅಲಿಯೇ ಉದಾಹರಣೆ.
ಮಾನವ ಹಕ್ಕುಗಳು ಉಲ್ಲಂಘನೆ ಮಾಡುತ್ತಿದ್ದಾರೆಂದು ಇತರರ ಮೇಲೆ ಪಾಕಿಸ್ತಾನ ಆರೋಪ ಮಾಡುತ್ತಿದೆ. ಯಾರು ಮಾನವ ಹಕ್ಕುಗಳನ್ನು ಉಲ್ಲಂಘನೆ ಮಾಡುತ್ತಿದ್ದಾರೆಂಬುದರ ಆತ್ಮಾವಲೋಕನವನ್ನು ಸ್ವತಃ ಪಾಕಿಸ್ತಾನವೇ ಮಾಡಿಕೊಳ್ಳಬೇಕಿದೆ.
ಬಲೂಚಿಸ್ತಾನದಲ್ಲಾಗುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆಯನ್ನು ಪಾಕಿಸ್ತಾನ ನೋಡಿಕೊಳ್ಳಬೇಕಿದೆ. ಇಂದು ಬಲೂಚಿಸ್ತಾನದ ಪರಿಸ್ಥಿತಿ ಇಡೀ ವಿಶ್ವವೇ ತಿರುಗಿ ನೋಡುವಂತೆ ಮಾಡಿದೆ. ಭಯೋತ್ಪಾದನೆ ವಿರುದ್ಧ ಹೋರಾಡಲು ನಾವು ಒಂದುಗೂಡಬೇಕಿದೆ. ಹೋರಾಟಕ್ಕೆ ಮುಂದೆ ಬಾರದವರನ್ನು ಪ್ರತ್ಯೇಕಗೊಳಿಸಬೇಕಿದೆ. ಭಯೋತ್ಪಾದನೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಿದೆ. ಇಂದು ನಾವು ಏನು ಮಾಡುತ್ತೀವೋ ಅದು ನಾಳೆ ನಡೆಯುವ ಬೆಳವಣಿಗೆಗಳ ಮೇಲೆ ಅವಲಂಬಿತವಾಗಿರುತ್ತದೆ ಎಂದು ತಿಳಿಸಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ನಡೆದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಾತನಾಡಿದ್ದ ಪಾಕಿಸ್ತಾನ ಪ್ರಧಾನಮಂತ್ರಿ ನವಾಜ್ ಶರೀಫ್ ಅವರು, ಕಾಶ್ಮೀರ ವಿಚಾರವನ್ನು ಪ್ರಸ್ತಾಪ ಮಾಡಿದ್ದರು. ಕಾಶ್ಮೀರ ವಿಚಾರದಲ್ಲಿ ಮಾತುಕತೆ ನಡೆಸಲು ಪಾಕಿಸ್ತಾನ ಸಿದ್ಧವಿದ್ದು, ಭಾರತವೇ ಮುಂದೆ ಬರುತ್ತಿಲ್ಲ ಎಂದು ಹೇಳಿದ್ದರು. ಅಲ್ಲದೆ, ಉಗ್ರ ಬುರ್ಹಾನ್ ವಾನಿ ಬಗ್ಗೆ ಮಾತನಾಡಿ, ಬುರ್ಹಾನ್ ವಾನಿಯೊಬ್ಬ ಯುವ ನಾಯಕನಾಗಿದ್ದ ಎಂದು ಪ್ರಶಂಸಿಸಿದ್ದರು. ಶರೀಫ್ ಅವರ ಈ ಭಾಷಣಕ್ಕೆ ಯಾವುದೇ ದೇಶಗಳು ಪ್ರತಿಕ್ರಿಯೆಗಳನ್ನು ನೀಡಿರಲಿಲ್ಲ.