ಇಸ್ಲಾಮಾಬಾದ್: ಭಾರತ ಗಡಿ ನಿಯಂತ್ರಣ ರೇಖೆಯಲ್ಲಿ ಭಾರತ ಸೇನೆ ನಡೆಸಿದ ಸೀಮಿತ ದಾಳಿಗೆ ಉರಿದುಕೊಂಡಿರುವ ಪಾಕಿಸ್ತಾನ ವಿಶ್ವಸಂಸ್ಥೆಗೆ ಮಾಹಿತಿ ನೀಡಲು ಸಿದ್ಧತೆ ನಡೆಸಿದೆ.
ವಿಶ್ವಸಂಸ್ಥೆಯಲ್ಲಿರುವ ಪಾಕಿಸ್ತಾನದ ಕಾಯಂ ಪ್ರತಿನಿಧಿ, ಮಲೀಹಾ ಲೋಧಿ, ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಬಾನ್ ಕಿ-ಮೂನ್ ಅವರನ್ನು ಭೇಟಿ ಮಾಡಲಿದ್ದು, ಭಾರತ ನಡೆಸಿರುವ ಸೀಮಿತ ದಾಳಿ ಬಗ್ಗೆ ಮಾಹಿತಿ ನೀಡಲಿದ್ದಾರೆ ಎಂದು ತಿಳಿದುಬಂದಿದೆ.
ಭಾರತದ ಸೀಮಿತ ದಾಳಿ ಬಗ್ಗೆ ಪ್ರತಿಕ್ರಿಯೆ ನೀಡಿರುವ ಲೋಧಿ, ಭಾರತದ ಪ್ರಚೋದನೆಯಿಂದ ಅಪಾಯಕಾರಿ ವಾತಾವರಣ ನಿರ್ಮಾಣವಾಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ ಎಂದು ರೇಡಿಯೋ ಪಾಕಿಸ್ತಾನ ವರದಿ ಮಾಡಿದೆ. ಮತ್ತೊಂದು ಇಂತಹದ್ದೇ ದಾಳಿ ನಡೆಯುವುದಕ್ಕೂ ಮುನ್ನ ಅಂತಾರಾಷ್ಟ್ರೀಯ ಸಮುದಾಯ ಎಚ್ಚೆತ್ತುಕೊಳ್ಳಬೇಕು ಎಂದು ಪಾಕಿಸ್ತಾನದ ಪ್ರತಿನಿಧಿ ಕರೆ ನೀಡಿದ್ದಾರೆ. ಪಾಕಿಸ್ತಾನ ಭಾರತದ ಪ್ರಚೋದನೆಗೆ ಗರಿಷ್ಠ ತಾಳ್ಮೆ ತೋರುತ್ತಿದೆ. ನಮ್ಮ ತಾಳ್ಮೆಗೂ ಮಿತಿ ಇದೆ ಎಂದು ಪಾಕಿಸ್ತಾನ ಎಚ್ಚರಿಸಿದೆ.