ವಿದೇಶ

ಅಮೆರಿಕದಲ್ಲಿ ಖ್ಯಾತ ಗಾಯಕ ಎಸ್ ಪಿಬಿ ಪಾಸ್ ಪೋರ್ಟ್, ಕ್ರೆಡಿಟ್ ಕಾರ್ಡ್ ಇದ್ದ ಬ್ಯಾಗ್ ಕಳವು

Manjula VN
ವಾಷಿಂಗ್ಟನ್: ಖ್ಯಾತ ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರ ಪಾಸ್ ಪೋರ್ಟ್, ಕ್ರೆಡಿಟ್ ಕಾರ್ಡ್ ಹಾಗೂ ಇನ್ನಿತರೆ ಪ್ರಮುಖ ದಾಖಲೆಗಳನ್ನು ಇರಿಸಿದ್ದ ಬ್ಯಾಗ್ ವೊಂದು ಅಮೆರಿಕದಲ್ಲಿ ಕಳವಾಗಿರುವುದಾಗಿ ಬುಧವಾರ ತಿಳಿದುಬಂದಿದೆ. 
ಸಿಯಾಟಲ್, ಲಾಸ್ ಏಂಜಲೀಸ್, ಸ್ಯಾನ್ ಜೋಸ್, ಡಲ್ಲಾಸ್, ಕನ್ಸಾಸ್ ಸೇರಿದಂತೆ ಅಮೆರಿಕದ ಹಲವು ಕಡೆ ಖಾಸಗಿ ಸಂಗೀತ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಸಲುವಾಗಿ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರು ಅಮೆರಿಕಾಗೆ ತೆರಳಿದ್ದಾರೆ. 
ಬ್ಯಾಗ್ ಕಳ್ಳತನವಾಗಿರುವ ಕುರಿತಂತೆ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರೇ ಸ್ವತಃ ತಮ್ಮ ಅಧಿಕೃತ ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ. ಬ್ಯಾಗ್ ಎಲ್ಲಿ ಕಳ್ಳತನವಾಗಿದೆ ಎಂಬುದರ ಬಗ್ಗೆ ಮಾಹಿತಿಗಳು ತಿಳಿದುಬಂದಿಲ್ಲ. 
ಬ್ಯಾಗ್ ಕಳ್ಳತವಾಗಿರುವ ವಿಚಾರ ತಿಳಿದುಬರುತ್ತಿದ್ದಂತೆಯೇ ಹೂಸ್ಟನ್ ನಲ್ಲಿರುವ ಭಾರತೀಯ ರಾಯಭಾರಿ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಂಡು ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರಿಗೆ 24 ಗಂಟೆಯೊಳಗಾಗಿ ನಕಲಿ ಪಾಸ್ ಪೋರ್ಟ್'ನ್ನು ನೀಡಿದ್ದಾರೆ. 
ಬ್ಯಾಗ್ ಕಳವು ಕುರಿತಂತೆ ಫೇಸ್ ಬುಕ್ ನಲ್ಲಿ ಬರೆದುಕೊಂಡಿರುವ ಎಸ್.ಪಿ.ಬಿ ಅವರು, ಎಲ್ಲರಿಗೂ ನಮಸ್ತೆ. ಜೀವನಲ್ಲಿ ಏಳು ಮತ್ತು ಬೀಳುಗಳು ಇದ್ದೇ ಇರುತ್ತದೆ. ಸಿಯಾಟಲ್, ಲಾಸ್ ಏಂಜಲೀಸ್, ಸ್ಯಾನ್ ಜೋಸ್, ಡಲ್ಲಾಸ್, ಕನ್ಸಾಸ್'ನಲ್ಲಿ ನಡೆಸಲಾದ ಸಂಗೀತ ಕಾರ್ಯಕ್ರಮದಲ್ಲಿ ಪ್ರೇಕ್ಷಕರ ಮೆಚ್ಚುಗೆ ಹಾಗೂ ಆಶೀರ್ವಾದವನ್ನು ಪಡೆದುಕೊಂಡೆ. 
ನನ್ನ ಜೀವನದ ಅತ್ಯಂತ ಯಶಸ್ವಿ ಸಂಗೀತ ಕಾರ್ಯಕ್ರಮ ಇದಾಗಿದ್ದು, ನನ್ನ ಮಗ ಚರಣ್, ರಾಷ್ಟ್ರೀಯ ಪ್ರಚಾರಕ ಶ್ರೀ. ರಾಜೇಶ್, ಸ್ಥಳೀಯ ಪ್ರಚಾರಕರು, ಪ್ರಾಯೋಜಕರು, ನನ್ನ ಮೆಚ್ಚಿನ ಸಂಗೀತಗಾರರು, ಸಹಾಯಕ ಗಾಯಕರು, ತಂತ್ರಜ್ಞರು, ಶ್ರೀಮತಿ ಚೈತ್ರ, ಶೈಲಜಾ ಅವರಿಗೆ ಧನ್ಯವಾದಗಳು.
ಪಾಸ್ ಪೋರ್ಟ್, ಕ್ರೆಡಿಟ್ ಕಾರ್ಡ್ ಗಳು ಹಾಗೂ ಹಣವನ್ನು ಇರಿಸಲಾಗಿದ್ದ ನನ್ನ ಬ್ಯಾಗ್ ಕಳ್ಳತನ ಮಾಡಲಾಗಿದೆ. ಹೂಸ್ಟನ್ ನಲ್ಲಿರುವ ಭಾರತೀಯ ರಾಯಭಾರಿ ಪಾರ್ವತಿ ಮತ್ತು ವಿಜಯಲಕ್ಷ್ಮಿ ಅವರು 24 ಗಂಟೆಯೊಳಗಾಗಿ ನನಗೆ ನಕಲಿ ಪಾಸ್ ಪೋರ್ಟ್ ಮಾಡಿಕೊಟ್ಟರು. ಈ ಮೂಲಕ ಅವರಿಗೆ ಧನ್ಯವಾದಗಳನ್ನು ಹೇಳುತ್ತಿದ್ದೇನೆ.
ಭಾರತದ ಹೆಮ್ಮೆ ಹಾಗೂ ಖ್ಯಾತ ಹಿಂದೂಸ್ತಾನಿ ಗಾಯಕಿ ಶ್ರೀಮತಿ ಕಿಶೋರಿ ಅಮೋನ್ಕರ್ ಅವರು ಅಗಲಿಕೆ ವಿಚಾರ ತಿಳಿದು ಬಹಳ ಆಘಾತವಾಯಿತು. ಅವರ ಕುಟುಂಬವನ್ನು ಅಮ್ಮ ಸರಸ್ವತಿ ನೋಡಿಕೊಳ್ಳಲಿ ಎಂದು ಕೇಳಿಕೊಳ್ಳುತ್ತೇನೆ. ಜಾನಕಿ ಜಿ ಅವರು ಸಂಗೀತ ಕ್ಷೇತ್ರದಲ್ಲಿ 60 ವರ್ಷಗಳನ್ನು ಪೂರೈಸಿದ್ದಾರೆ. ಅವರಿಗೆ ಮತ್ತಷ್ಟು ಹಾಡುಗಳನ್ನು ಹಾಡಲು ಅವರಿಗೆ ಹೆಚ್ಚಿನ ಆರೋಗ್ಯವನ್ನು ನೀಡಲಿ ಎಂದು ಹಾರೈಸುತ್ತೇನೆ. ಜೀವನವೊಂದು ಖಟ್ಟಾ ಮೀಟಾ (ಸಿಹಿ-ಕಹಿ) ಆಗಿದ್ದು, ನಮ್ಮ ಪ್ರವಾಸವನ್ನು ಮುಂದುವರೆಸಬೇಕು ಎಂದು ಹೇಳಿದ್ದಾರೆ. 
SCROLL FOR NEXT