ವಿದೇಶ

ಪಾಕ್ ಭಯೋತ್ಪಾದಕ ಜಾಲಗಳ ವಿರುದ್ದ ವಿಶ್ವಸಮುದಾಯ ಕ್ರಮಕೈಗೊಳ್ಳಬೇಕು: ಜೇಟ್ಲಿ

Manjula VN
ನ್ಯೂಯಾರ್ಕ್: ವಿಶ್ವದಲ್ಲಿರುವ ಪ್ರತೀಯೊಂದು ಉಗ್ರ ಸಂಘಟನೆಯ ಭಯೋತ್ಪಾದಕರು ಒಂದಲ್ಲ ಒಂದು ರೀತಿ ಪಾಕಿಸ್ತಾನದೊಂದಿಗೆ ನಂಟನ್ನು ಹೊಂದಿದ್ದು, ಪಾಕಿಸ್ತಾನ ಭಯೋತ್ಪಾದನಾ ಸಂಘಟನೆಗಳ ಜಾಲದ ವಿರುದ್ಧ ವಿಶ್ವ ಸಮುದಾಯ ಕ್ರಮಕೈಗೊಳ್ಳಬೇಕೆಂದು ಹಣಕಾಸು ಮತ್ತು ರಕ್ಷಣಾ ಖಾತೆ ಜವಾಬ್ದಾರಿ ಹೊತ್ತಿರುವ ಕೇಂದ್ರ ಸಚಿವ ಅರುಣ್ ಜೇಟ್ಲಿಯವರು ಸೋಮವಾರ ಹೇಳಿದ್ದಾರೆ. 
ವಿದೇಶಿ ಸಂಬಂಧ ಕುರಿತ ಸಭೆಯಲ್ಲಿ ಮಾತನಾಡಿರುವ ಅವರು, ನೆರೆರಾಷ್ಟ್ರಗಳೊಂದಿಗಿನ ಭಾರತದ ಸಂಬಂಧ ಸಾಕಷ್ಟು ಸುಧಾರಣೆಗೊಂಡಿದ್ದು, ನಮಗೆ ಸಮಸ್ಯೆ ಎದುರಾಗುತ್ತಿರುವುದು ಪಶ್ಚಿಮ ನೆರೆರಾಷ್ಟ್ರದಿಂದ. ಇದಕ್ಕೆ ಕಾರಣ ಭಯೋತ್ಪಾದನೆ ಎಂದು ಹೇಳಿದ್ದಾರೆ. 
ಪಾಕಿಸ್ತಾನ ಜೊತೆಗಿನ ಸಂಬಂಧವನ್ನು ಹೆಚ್ಚಿಸಿಕೊಳ್ಳುವ ಸಲುವಾಗಿ ಭಾರತ ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಿದೆ. ಆದರೆ, ಪ್ರತೀ ಪ್ರಯತ್ನಕ್ಕೂ ದ್ವೇಷಪೂರಿತ ಪ್ರತಿಕ್ರಿಯೆಗಳೇ ಪಾಕಿಸ್ತಾನದ ಕಡೆಯಿಂದ ಬರುತ್ತಿದೆ. ಕುಲ್'ಭೂಷಣ್ ಜಾಧವ್ ಅವರಿಗೆ ಪಾಕಿಸ್ತಾನ ಸೇನಾ ನ್ಯಾಯಾಲಯದ ಗಲ್ಲುಶಿಕ್ಷೆ ವಿಧಿಸಿದೆ. ಈ ರೀತಿಯ ಬೆಳವಣಿಗಗಳು ಎರಡು ರಾಷ್ಟ್ರಗಳ ನಡುವೆ ಶಾಂತಿಯುತ ಸಂಬಂಧಕ್ಕೆ ದಾರಿ ಮಾಡಿಕೊಡುವುದಿಲ್ಲ. 
ಜಾಧವ್ ಬೇಹುಗಾರಿಕೆ ನಡೆಸುತ್ತಿದ್ದ ಎಂದು ಪಾಕಿಸ್ತಾನ ಆರೋಪಿಸಿದೆ. ಆದರೆ, ಹಿನ್ನಲೆಯಲ್ಲಿ ನೋಡುವುದಾದರೆ, ಸಮಸ್ಯೆ ಹಾಗೂ ವಿವಾದಗಳು ಎದುರಾಗಿದ್ದು ಇರಾನ್ ಗಡಿಯಿಂದ. ಆದರೆ, ಪಾಕಿಸ್ತಾನ ಸೇನಾ ನ್ಯಾಯಲಯ ಜಾಧವ್ ಗೆ ಗಲ್ಲುಶಿಕ್ಷೆ ವಿಧಿಸಿದೆ. 
ಪಾಕಿಸ್ತಾನದ ಜೊತೆಗಿನ ಸಂಬಂಧವನ್ನು ವೃದ್ಧಿಸಲು ಸರ್ಕಾರ ಸಾಕಷ್ಟು ಶ್ರಮಗಳನ್ನು ನಡೆಸಿದೆ. ಕಳೆದ ಕೆಲ ವರ್ಷಗಳನ್ನೇ ನೋಡಿದರೆ, ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಪಾಕಿಸ್ತಾನಕ್ಕೆ ಭೇಟಿ ನೀಡಿದ್ದರು. ಇದಾದ ಕೆಲವೇ ದಿನಗಳಲ್ಲಿ ಪಠಾಣ್ ಕೋಟ್ ಸೇನಾ ನೆಲೆಯ ಮೇಲೆ ಉಗ್ರರ ದಾಳಿ ನಡೆಯಿತು. ನಂತರ ಉರಿ ಸೇನಾ ನೆಲೆಯ ಮೇಲೆ ದಾಳಇ ನಡೆಸಲಾಯಿತು ಎಂದು ತಿಳಿಸಿದ್ದಾರೆ. 
ಇದೇ ವೇಳೆ ನೆರೆರಾಷ್ಟ್ರದೊಂದಿಗಿನ ಭಾರತದ ಸಂಬಂಧ ಕುರಿತ ಪ್ರೇಕ್ಷಕರ ಪ್ರಶ್ನೆಗಳಿಗೆ ಉತ್ತರ ನೀಡಿರುವ ಜೇಟ್ಲಿಯವರು, ಚೀನಾದೊಂದಿಗಿನ ಆರ್ಥಿಕ ಸಂಬಂಧ ಉತ್ತಮ ರೀತಿಯಲ್ಲಿ ಅಭಿವೃದ್ಧಿಗೊಂಡಿದೆ. ಅಂದಿನ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿಯವರು ಗಡಿ ಸಮಸ್ಯೆಯನ್ನು ಪರಿಹರಿಸಲು ನೇತೃತ್ವ ವಹಿಸಿದ್ದರು ಸಮಸ್ಯೆಗೆ ಪರಿಹಾರ ಸಿಕ್ಕಿರಲಿಲ್ಲ. 
ಗಡಿ ಸಮರ್ಥಿಸಿಕೊಳ್ಳುವುದರ ಜೊತೆಗೆ ಇತರೆ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ನಮ್ಮಲ್ಲಿ ವ್ಯವಸ್ಥೆಯಿದೆ. ಆದರೆ,  ವ್ಯವಸ್ಥೆಯಿದ್ದರೂ ಕಳೆದ 14 ವರ್ಷಗಳಿಂದ ನಮಗೆ ಸಮಸ್ಯೆ ಕುರಿತಂತೆ ಉತ್ತರ ಕಂಡುಕೊಳ್ಳಲು ಸಾಧ್ಯವಾಗುತ್ತಿಲ್ಲ. ಗಡಿ ಸಮಸ್ಯೆಗಳನ್ನು ಇತ್ಯರ್ಥಪಡಿಸುವುದು ಅತ್ಯಂತ ಪ್ರಮುಖವಾಗಿದೆ ಎಂದು ನಾವು ನಂಬಿದ್ದೇವೆ. ಏಕೆಂದರೆ, ಗಡಿ ವಿಚಾರ ಸ್ಥಳೀಯ ಶಾಂತಿ ಹಿತಾಸಕ್ತಿಗೆ ಸಂಬಂಧಿಸಿದ್ದಾಗಿದೆ ಎಂದು ತಿಳಿಸಿದ್ದಾರೆ. 
SCROLL FOR NEXT