ಬರ್ಲಿನ್: ಜರ್ಮನಿಯ ಸಂಸತ್ತಿನ ಕೆಳಮನೆಯ ಸದಸ್ಯರು, ಬುರ್ಕಾ ತೊಡುವುದಕ್ಕೆ ಮಾಡಿರುವ ಅರೆ ನಿಷೇಧದ ಕಾನೂನಿಗೆ ಒಪ್ಪಿಗೆ ನೀಡಿದ್ದಾರೆ ಎಂದು ಮಾಧ್ಯಮವೊಂದು ಶುಕ್ರವಾರ ವರದಿ ಮಾಡಿದೆ.
ಈ ಆದೇಶದ ಪ್ರಕಾರ ಕೆಲಸದ ಸಮಯದಲ್ಲಿ ಸರ್ಕಾರಿ ಅಧಿಕಾರಿಗಳು, ನ್ಯಾಯಾಧೀಶರು ಮತ್ತು ಯೋಧರು ಬುರ್ಕಾ ತೊಡುವಂತಿಲ್ಲ.
ಈಗ ಈ ಕಾನೂನು ಮೇಲ್ಮನೆಯಲ್ಲಿ ಚರ್ಚೆಯಾಗಲಿದೆ.
ಸಾರ್ವಜನಿಕ ಪ್ರದೇಶಗಳಲ್ಲಿ ಬುರ್ಕಾವನ್ನು ಸಂಪೂರ್ಣವಾಗಿ ನಿಷೇಧಿಸಿರುವ ಫ್ರಾನ್ಸ್ ದೇಶದಂತೆ ಜರ್ಮನಿಯಲ್ಲಿಯೂ ಜಾರಿಗೆ ತರಬೇಕೆಂದು ೨೦೧೧ ರಿಂದಲೂ ಬಲಪಂಥೀಯ ಪಕ್ಷಗಳು ಆಗ್ರಹಿಸಿದ್ದವು.
ಕಾನೂನಾತ್ಮಕವಾಗಿ ಎಲ್ಲೆಲ್ಲಿ ಸಾಧ್ಯವೋ ಅಲ್ಲಲ್ಲಿ ಬುರ್ಕಾವನ್ನು ನಿಷೇಧಿಸಲು ಚಾನ್ಸೆಲರ್ ಏಂಜೆಲಾ ಮರ್ಕೆಲ್ ಕಳೆದ ಡಿಸೆಂಬರ್ ನಲ್ಲಿ ಕರೆ ಕೊಟ್ಟಿದ್ದರು. ಇದು ನಮ್ಮ ದೇಶಕ್ಕೆ ಪ್ರಸ್ತುತವಲ್ಲ ಎಂದು ಕೂಡ ಅವರು ಹೇಳಿದ್ದರು.
ಸಿರಿಯಾ ಮತ್ತು ಮಧ್ಯ ಪ್ರಾಚ್ಯ ಮುಸ್ಲಿಂ ದೇಶಗಳಲ್ಲಿ ನಡೆಯುತ್ತಿರುವ ಯುದ್ಧದಿಂದ ಸುಮಾರು ೧೦ ಲಕ್ಷಕ್ಕೂ ಹೆಚ್ಚು ಜನ ಕಳೆದು ೧೮ ತಿಂಗಳುಗಳಿಂದ ಜರ್ಮನಿಯಲ್ಲಿ ನಿರಾಶ್ರಿತರಾಗಿ ಆಶ್ರಯ ಪಡೆದಿದ್ದಾರೆ.
ಬರ್ಲಿನ್ ಕ್ರಿಸ್ಮಸ್ ಮಾರುಕಟ್ಟೆಯಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ೧೨ ಜನ ಮೃತಪಟ್ಟ ಹಾಗು ಮತ್ತಿತರ ಭಯೋತ್ಪಾದಕ ದಾಳಿಗಳ ಹಿನ್ನಲೆಯಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ.
ಫ್ರಾನ್ಸ್, ಆಸ್ಟ್ರಿಯಾ, ಬೆಲ್ಜಿಯಂ, ಟರ್ಕಿ ಮತ್ತಿತರ ಹಲವಾರು ದೇಶಗಳು ಸಾರ್ವಜನಿಕ ಪ್ರದೇಶಗಳಲ್ಲಿ ಬುರ್ಕಾ ತೊಡುವುದನ್ನು ನಿಷೇಧಿಸಿವೆ. ನೆದರ್ ಲ್ಯಾಂಡ್ಸ್ ನಲ್ಲಿ ಕೂಡ ಈ ಕಾನೂನು ಜಾರಿಮಾಡಲು ಮಾತುಕತೆ ನಡೆಯುತ್ತಿದ್ದರೆ, ಡೆನ್ಮಾರ್ಕ್, ರಷ್ಯಾ, ಸ್ಪೇನ್ ಮತ್ತು ಸ್ವಿಟ್ಸರ್ ಲ್ಯಾಂಡ್ ದೇಶಗಳಲ್ಲೂ ಕೆಲವು ಕಡೆ ನಿಷೇಧ ಹೇರಲಾಗಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos