ನವದೆಹಲಿ: ಪ್ಯಾರಿಸ್ ಹವಾಮಾನ ಒಪ್ಪಂದಕ್ಕೆ ಭಾರತ, ರಷ್ಯಾ ಮತ್ತು ಚೀನಾ ದೇಶಗಳು ಯಾವುದೇ ಕೊಡುಗೆ ನೀಡುತ್ತಿಲ್ಲ. ಹಣ ಪಾವತಿಸುವಂತೆ ಅಮೆರಿಕಾವನ್ನು ಅನ್ಯಾಯವಾಗಿ ಗುರಿಪಡಿಸಲಾಗುತ್ತಿದೆ ಎಂದು ಅಮೆರಿಕಾ ಆಪಾದಿಸಿದೆ.
ಹವಾಮಾನ ಬದಲಾವಣೆ ಕುರಿತು ಪ್ಯಾರಿಸ್ ಒಪ್ಪಂದ ಏಕಮುಖವಾಗಿತ್ತು ಎಂದು ಹೇಳಿರುವ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಒಪ್ಪಂದ ಕುರಿತು ದೊಡ್ಡ ನಿರ್ಧಾರ ಕೈಗೊಳ್ಳುವುದಾಗಿ ಹೇಳಿದ್ದಾರೆ.
ಮುಂದಿನ ಎರಡು ವಾರಗಳಲ್ಲಿ ಪ್ಯಾರಿಸ್ ಒಪ್ಪಂದ ಕುರಿತು ದೊಡ್ಡ ನಿರ್ಧಾರ ಕೈಗೊಳ್ಳಲಾಗುವುದು. ಏನಾಗುತ್ತದೆ ನೋಡೋಣ ಎಂದು ಪೆನ್ಸಿಲ್ವೇನಿಯಾದಲ್ಲಿ 100 ದಿನಗಳ ಅಧಿಕಾರಾವಧಿ ಪೂರೈಸಿದ ಸಂದರ್ಭದಲ್ಲಿ ಹೇಳಿದರು.
ಏಕಮುಖದ ಪ್ಯಾರಿಸ್ ಒಪ್ಪಂದಕ್ಕೆ ಅಮೆರಿಕಾ ಕೋಟಿಗಟ್ಟಲೆ ಹಣ ಪಾವತಿ ಮಾಡುತ್ತಿದೆ. ಚೀನಾ, ರಷ್ಯಾ ಮತ್ತು ಭಾರತ ದೇಶಗಳ ಕೊಡುಗೆ ಏನೂ ಇಲ್ಲ. ಇನ್ನಷ್ಟು ಮಾಲಿನ್ಯ ಹೆಚ್ಚಿಸಿದ್ದಾರೆ ಎಂದರು.
ಹವಾಮಾನ ಬದಲಾವಣೆ ಕುರಿತು ವಿಶ್ವಸಂಸ್ಥೆಯ ಚೌಕಟ್ಟು ಸಭೆಯೊಳಗೆ ಪ್ಯಾರಿಸ್ ಹವಾಮಾನ ಒಪ್ಪಂದಕ್ಕೆ 194 ದೇಶಗಳು 2015ರಲ್ಲಿ ಸಹಿ ಹಾಕಿದ್ದವು. 143 ದೇಶಗಳು ಅನುಮೋದನೆ ನೀಡಿದ್ದವು. ಕಾರ್ಖಾನೆಗಳಿಂದ ಹೊರಸೂಸುವ ಅನಿಲಗಳ ಪ್ರಮಾಣವನ್ನು ಕಡಿಮೆ ಮಾಡಿ ಜಾಗತಿಕ ತಾಪಮಾನ 2 ಡಿಗ್ರಿ ಸೆಲ್ಸಿಯಸ್ ಗಿಂತ ಕಡಿಮೆ ಮಾಡುವುದು ಹಾಗೂ ಹಸಿರು ಮನೆ ಪರಿಣಾಮವನ್ನು ಕಡಿಮೆ ಮಾಡುವುದು ಇದರ ಉದ್ದೇಶವಾಗಿದೆ.