ಬೀಜಿಂಗ್: ಚೀನಾದ ಸಿಚುವಾನ್ ಪ್ರಾಂತ್ಯದ ಜಿಯುಜಾಯ್'ಗಾವು ಕೌಂಟಿಯಲ್ಲಿ 6.5 ತೀವ್ರತೆಯ ಪ್ರಮಾಣದ ಭಾರೀ ಭೂಕಂಪವಾಗಿದ್ದು, ನೂರಾರು ಜನರು ಸಾವನ್ನಪ್ಪಿರುವ ಶಂಕೆಗಳು ವ್ಯಕ್ತವಾಗಿದೆ.
ಸರ್ಕಾರಿ ಮೂಲಗಳು ನೀಡಿರುವ ಮಾಹಿತಿ ಪ್ರಕಾರ ಈ ವರೆಗೂ 88ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದು, ಇದರಲ್ಲಿ 7 ಮಂದಿ ಸಾವನ್ನಪ್ಪಿದ್ದು, 21 ಮಂದಿಯ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಿದೆ. ಆದರೆ, ಕೆಲವು ವರದಿಗಳ ಪ್ರಕಾರ ಮೃತರ ಸಂಖ್ಯೆ 100ಕ್ಕೂ ಅಧಿಕಾವಾಗುವ ಸಾಧ್ಯತೆಯಿದೆ ಎನ್ನಲಾಗಿದೆ. ಸಾವನ್ನಪ್ಪಿರುವ 7 ಮಂದಿಯ ಪೈಕಿ 5 ಮಂದಿ ಪ್ರವಾಸಿಗರೆಂದು ಹೇಳಲಾಗುತ್ತಿದೆ.
ಮಂಗಳವಾರ ರಾತ್ರಿ 9.19ಕ್ಕೆ 20 ಕಿ.ಮೀ ಆಳದಲ್ಲಿ ಕಂಪನವುಂಟಾಗಿದೆ. ಶ್ವಾನದಳಗಳೊಂದಿಗೆ ರಕ್ಷಣಾ ಕಾರ್ಯಾಚರಣೆಗಳು ಭರದಿಂದ ಸಾಗಿದೆ. 13,000ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ ಎನ್ನಲಾಗಿದೆ.