ಲಂಡನ್: ಬ್ರಿಟನ್‌ನಲ್ಲಿ ಹಣಕಾಸು ವಹಿವಾಟು ನಡೆಸುವವರ ಮೇಲೆ ನಿರ್ಬಂಧ ವಿಧಿಸಲಾಗಿರುವ ವ್ಯಕ್ತಿಗಳು ಮತ್ತು ಸಂಘಟನೆಗಳ ಪಟ್ಟಿಯಲ್ಲಿ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಹೆಸರು ಸೇರ್ಪಡೆಯಾಗಿದೆ. ದಾವೂದ್ ಇಬ್ರಾಹಿಂ ಮಾತ್ರ ಈ ಪಟ್ಟಿಯಲ್ಲಿ ಕಾಣಿಸಿಕೊಂಡಿರುವ ಭಾರತದ ಏಕೈಕ ವ್ಯಕ್ತಿಯಾಗಿದ್ದಾನೆ.
ಬ್ರಿಟನ್ ಹಣಕಾಸು ಇಲಾಖೆ ಈ ಬಗ್ಗೆ ಪಟ್ಟಿ ಬಿಡುಗಡೆ ಮಾಡಿದ್ದು, ದಾವೂದ್ ಇಬ್ರಾಹಿಂನ ಕರಾಚಿಯಲ್ಲಿನ ಮೂರು ವಿಳಾಸಗಳು ಹಾಗೂ 21 ಅಲಿಯಾಸ್ ಹೆಸರುಗಳನ್ನು ನೀಡಿರುವ ದಾಖಲೆಗಳು ಸಹ ಪತ್ತೆಯಾಗಿವೆ.
ಈ ಕ್ರಮದಿಂದ ಹಣ ವರ್ಗಾವಣೆಗೆ ನಿಷೇಧ ಹೇರಲಾಗುವುದು ಮತ್ತು ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಅವಕಾಶವಿದೆ ಎಂದು ಬ್ರಿಟನ್ ತಿಳಿಸಿದೆ.
ಬ್ರಿಟನ್ ಹಣಕಾಸು ಇಲಾಖೆ ಬಿಡುಗಡೆ ಮಾಡಿರುವ ಈ ಪಟ್ಟಿಯಲ್ಲಿ ದಾವೂದ್ ಬಗ್ಗೆ ಹಲವು ಗಮನಾರ್ಹ ಅಂಶಗಳು ಹೊರ ಬಿದ್ದಿವೆ. ಪಾಕಿಸ್ತಾನದ ಮೂರು ವಿಳಾಸಗಳಲ್ಲಿ ದಾವೂದ್ ವಾಸಿಸುತ್ತಿದ್ದಾನೆ ಎಂಬುದು ಗಮಿನಿಸಬೇಕಾದ ಅಂಶವಾಗಿದೆ.
ಡಿಫೆನ್ಸಿಂಗ್ ಅಥಾರಿಟಿ, ಕರಾಚಿ, ಪಾಕಿಸ್ತಾನ, ನೂರಾಬಾದ್, ಕರಾಚಿ, ಪಾಕಿಸ್ತಾನ, ಮತ್ತು ವೈಟ್ ಹೌಸ್, ಸೌದಿ ಮಸೀದಿ ಪಕ್ಕ, ಕರಾಚಿ ಪಾಕಿಸ್ತಾನ ಈ ವಿಳಾಸಗಳಲ್ಲಿ ಆತ ವಾಸಿಸುತ್ತಿದ್ದಾನೆ ಎಂದು ಹೇಳಲಾಗಿದೆ.
ಭೂಗತ ಪಾತಕಿ ದಾವೂದ್ ಇಬ್ರಾಹಿಂ 1993ರ ಮಾರ್ಚ್ 12 ರಂದು ನಡೆದ ಮುಂಬಯಿ ಸರಣಿ ಸ್ಫೋಟದ ದಾಳಿಯ ರೂವಾರಿಯಾಗಿದ್ದನು, ಈ ದಾಳಿಯಲ್ಲಿ ನೂರಾರು ಮಂದಿಯ ಮಾರಣ ಹೋಮಕ್ಕೆ ಕಾರಣನಾಗಿ ನಂತರ ದೇಶ ಬಿಟ್ಟು ಪರಾರಿಯಾಗಿದ್ದ.