ಬೀಜಿಂಗ್: ಮೂರು ತಿಂಗಳಾಗುತ್ತಾ ಬಂದಲೂ ಸಿಕ್ಕಿಂ ಸಮೀಪದ ಡೋಕ್ಲಾಮ್ ವಿವಾದ ಬಗೆಹರಿಯದ ಹಿನ್ನಲೆಯಲ್ಲಿ ಹತಾಶಗೊಂಡಿರುವ ಚೀನಾ, ಭಾರತಕ್ಕೆ ಮತ್ತೆ ಬೆದರಿಕೆ ಹಾಕುವ ತನ್ನ ಯತ್ನವನ್ನು ಮುಂದುವರೆಸಿದ್ದು, ಹಿಂದು ಮಹಾಸಾಗರದಲ್ಲಿ ಮತ್ತೆ ಚೀನಾ ತನ್ನ ಸಮರಾಭ್ಯಾಸವನ್ನು ನಡೆಸಿದೆ.
ಡೋಕ್ಲಾಮ್ ಬಿಕ್ಕಟ್ಟು ಆರಂಭವಾದ ಬಳಿಕ ಟಿಬೆಟ್ ಬಳಿ ಸಾಕಷ್ಟು ಬಾರಿ ಸಮರಾಭ್ಯಾಸ ನಡೆಸಿದರೂ ಭಾರತದಿಂದ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನಲೆಯಲ್ಲಿ ಇದೀಗ ಹಿಂದು ಮಹಾಸಾಗರದಲ್ಲಿ ಅತಿ ಅಪರೂಪದ ಸಮರಾಭ್ಯಾಸ ನಡೆಸಿ ಭಾರತವನ್ನು ಮತ್ತೊಮ್ಮೆ ಬೆದರಿಸಲು ಚೀನಾ ಯತ್ನ ನಡೆಸಿದೆ.
ಚೀನಾದ ಯುದ್ಧ ನೌಕೆಗಳಾಗ ಚಾಂಗ್ ಚುನ್, ಜಿಂಗ್ ಝೌ ಹಾಗೂ ಸಾಮಾಗ್ರಿ ಸರಬರಾಜು ನೌಕೆ ಚೌಹು ಹಿಂದು ಮಹಾಸಾಗರದಲ್ಲಿ ಸಮರಾಭ್ಯಾಸದಲ್ಲಿ ಪಾಲ್ಗೊಂಡಿದ್ದವು.
'ಶತ್ರು' ನೌಕೆಗಳ ಮೇಲೆ ದಾಳಿ ನಡೆಸಿದವು. ನೈಜ ಯುದ್ಧ ಎದುರಾದರೆ ಪಡೆಗಳ ಕಾರ್ಯನಿರ್ವಹಣೆ ಸುಧಾರಿಸಲು ಈ ಕಾರ್ಯಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು ಎಂದು ಚೀನಾದ ಸುದ್ಧಿ ಸಂಸ್ಥೆ ಕ್ಸಿನ್ಹುವಾ ವರದಿ ಮಾಡಿದೆ. ಡೋಕ್ಲಾಮ್ ವಿವಾದದ ಬಳಿಕ ಹಿಂದು ಮಹಾಸಾಗರದಲ್ಲಿ ಚೀನಾ ಸಮರಾಭ್ಯಾಸ ನಡೆಸಿರುವುದು ಇದೇ ಮೊದಲೆಂದು ಹೇಳಲಾಗುತ್ತಿದೆ.