ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಮುಖ್ಯಮಂತ್ರಿ ಶಹಭಾಜ್ ಷರೀಫ್
ಲಾಹೋರ್: ಅಮೆರಿಕಾ ರಾಷ್ಟ್ರದ ನೆರವಿದೆ ವಿದಾಯ ಹೇಳಲು ಇದು ಸಕಾಲವಾಗಿದೆ ಎಂದು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಮುಖ್ಯಮಂತ್ರಿ ಶಹಭಾಜ್ ಷರೀಫ್ ಅವರು ಶನಿವಾರ ಹೇಳಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಪಾಕಿಸ್ತಾನದ ವಿರುದ್ಧ ವಾಗ್ದಾಳಿ ನಡೆಸಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, 'ಭಯೋತ್ಪಾದಕ ಸಂಘಟನೆಗಳಿಗೆ ಸುರಕ್ಷಿತ ನೆಲೆ ಒದಗಿಸುತ್ತಿರುವ ಪಾಕ್ ನೀತಿಯ ಬಗ್ಗೆ ಇನ್ನು ನಾವು ಸುಮ್ಮನಿರಲಾರೆವು. ಅಫ್ಘಾನಿಸ್ತಾನದಲ್ಲಿ ಶಾಂತಿ, ಸ್ಥಿರತೆ ಕಾಪಾಡುವಲ್ಲಿ ನಮ್ಮ ಪ್ರಯತ್ನದ ಜತೆ ಕೈಜೋಡಿಸುವ ಮೂಲಕ ಪಾಕಿಸ್ತಾನ ಸಾಕಷ್ಟು ಪ್ರಯೋಜನಗಳನ್ನು ಗಳಿಸಬಹುದಿತ್ತು. ಆದರೆ ಅದು ಅಪರಾಧಿಗಳು ಮತ್ತು ಉಗ್ರರಿಗೆ ಸುರಕ್ಷಿತ ನೆಲೆಗಳನ್ನು ಒದಗಿಸುತ್ತ ಒಳ್ಳೆಯ ಅವಕಾಶಗಳನ್ನು ಕಳೆದುಕೊಳ್ಳುತ್ತಿದೆ. ಪಾಕಿಸ್ತಾನವು ಭಯೋತ್ಪಾದಕರನ್ನು ಮಟ್ಟಹಾಕದಿದ್ದರೆ ಅದರೊಂದಿಗಿನ ಮಿಲಿಟರಿ ಮತ್ತು ಇತರ ಸಹಕಾರ ಮುಂದುವರಿಯದು ಎಂದು ಹೇಳಿದ್ದರು.
ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಶಹಭಾಜ್ ಷರೀಫ್ ಅವರು, ಭಯೋತ್ಪಾದನೆ, ಬಡತನ ಹಾಗೂ ಹಿಂದುಳಿದಿರುವಿಕೆಯಿಂದ ಬಳಲುತ್ತಿರುವ ಪಾಕಿಸ್ತಾನಕ್ಕೆ ಅಮೆರಿಕ ನೀಡುತ್ತಿರುವ ನೆರವು ಕುರಿತು ರಾಷ್ಟ್ರೀಯ ಹಾಗೂ ಆಂತರಾಷ್ಟ್ರೀ ಮಟ್ಟದಲ್ಲಿ ಉತ್ಪ್ರೇಕ್ಷಿತವಾದ ಟೀಕೆ ಹಾಗೂ ಹೇಳಿಕೆಗಳನ್ನು ನೀಡಲಾಗುತ್ತಿದೆ. ಇದು ಗಾಯದ ಮೇಲೆ ಉಪ್ಪು ಸವರಿದಂತಾಗಿದೆ ಎಂದು ಹೇಳಿದ್ದಾರೆ.
ಇದೀಗ ಧನ್ಯವಾದ ಹೇಳುವ ಮೂಲಕ ಅಮೆರಿಕಾದ ನೆರವಿನ ಅಧ್ಯಾಯಕ್ಕೆ ಪಾಕಿಸ್ತಾನ ವಿದಾಯ ಹೇಳುವ ಕಾಲ ಬಂದಿದ್ದು, ಇಂತಹ ಹೇಳಿಕೆ ಹಾಗೂ ಟೀಕೆಗಳಿಗೆ ಇದೊಂದೇ ಮಾರ್ಗದ ಮೂಲಕ ತಿರುಗೇಟು ನೀಡಬಹುದಾಗಿದೆ. ಪಾಕಿಸ್ತಾನದಲ್ಲಿರುವ ಜನರು ವಿಶ್ವದ ಶಾಂತಿ ಹಾಗೂ ಸಮೃದ್ಧಿಗೆ ಕೊಡುಗೆ ನೀಡಲು ಬದ್ಧರಾಗಿದ್ದಾರೆಂದು ಎಂದು ತಿಳಿಸಿದ್ದಾರೆ.