ವಿದೇಶ

ಡೋಕ್ಲಾಮ್ ಬಿಕ್ಕಟ್ಟು ಭಾರತಕ್ಕೆ ಒಂದು ಪಾಠ ಎಂದ ಚೀನಾ!

Manjula VN
ಬೀಜಿಂಗ್: ಭಾರತ ಹಾಗೂ ಚೀನಾ ರಾಷ್ಟ್ರಗಳ ನಡುವಿನ ವೈಮನಸ್ಸಿಗೆ ಕಾರಣವಾಗಿದ್ದ ಡೋಕ್ಲಾಮ್ ವಿವಾದ ಸುಖಾಂತ್ಯ ಕಂಡಿದ್ದು, ಈ ನಡುವೆ ಚೀನಾ ಮತ್ತೆ ಭಾರತವನ್ನು ಕೆಣಕುವ ತನ್ನ ಯತ್ನಗಳನ್ನು ಮುಂದುರೆಸಿದೆ. ಡೋಕ್ಲಾಮ್ ಬಿಕ್ಕಟ್ಟಿನ ಸಂಪೂರ್ಣ ಬೆಳವಣಿಗೆಗಳಿಂದ ಭಾರತ ಪಾಠ ಕಲಿಯಬೇಕಿದೆ ಎಂದು ಚೀನಾ ಮಂಗಳವಾರ ಹೇಳಿದೆ. 
ಡೋಕ್ಲಾಮ್ ವಿವಾದ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಪೀಪಲ್ಸ್ ಲಿಬ್ರೆರೇಷನ್ ಆರ್ಮಿಯ ವಕ್ತಾರ ಕರ್ನಲ್ ವೂ ಕಿಯಾನ್, ಡೋಕ್ಲಾಮ್ ಬಿಕ್ಕಟ್ಟಿನ ಸಂಪೂರ್ಣ ಬೆಳವಣಿಗೆಗಳಿಂದ ಭಾರತ ಪಾಠ ಕಲಿಸಬೇಕಿದೆ. ಗಡಿ ಕುರಿತ ಒಪ್ಪಂದಗಳು ಮತ್ತು ಅಂತರಾಷ್ಟ್ರೀಯ ಕಾನೂನಿನ ಮೂಲಭೂತ ತತ್ತ್ವಗಳಿಗೆ ಭಾರತ ಬದ್ಧವಾಗಿರಬೇಕು ಎಂದು ಹೇಳಿದ್ದಾರೆ. 
ಗಡಿಯಲ್ಲಿ ಶಾಂತಿ ಹಾಗೂ ಸ್ಥಿರತೆಯನ್ನು ಕಾಪಾಡುವ ಸಲುವಾಗಿ ಮತ್ತು ಉಭಯ ರಾಷ್ಟ್ರಗಳ ಸೇನಾ ಪಡೆಗಳ ಆರೋಗ್ಯಕರ ಬೆಳವಣಿಗೆಗಳನ್ನು ಉತ್ತೇಜಿಸಲು ಉಭಯ ರಾಷ್ಟ್ರಗಳು ಕೆಲಸ ಮಾಡಬೇಕಿದೆ ಎಂದು ತಿಳಿಸಿದ್ದಾರೆ. 
ಡೋಕ್ಲಾಮ್ ವಿವಾದ ಸಂಬಂಧ ಭಾರತ ಹಾಗೂ ಚೀನಾ ಸೇನೆ ಮುಖಾಮುಖಿಗೊಂಡ ಬಳಿಕ ವಿವಾದಿತ ಗಡಿಯಲ್ಲಿ ಚೀನಾ ಪಡೆಗಳು ಹೆಚ್ಚಿನ ಕಣ್ಗಾವಲಿರಿಸಲಿದೆ. ದೇಶದ ಗಡಿ ಹಾಗೂ ಸಾರ್ವಭೌಮತ್ವವನ್ನು ಚೀನಾ ಪಡೆಗಳು ಸಮರ್ಥಿಸಿಕೊಳ್ಳುತ್ತದೆ. ಪ್ರಾದೇಶಿಕ ಶಾಂತಿ ಹಾಗೂ ಗಡಿಯಲ್ಲಿರುವ ಸಾಮಾನ್ಯ ಜನರ ಹಿತಾಸಕ್ತಿಗೆ ಅನುಗುಣವಾಗಿ ಭಾರತ ಹಾಗೂ ಚೀನಾ ರಾಷ್ಟ್ರಗಳು ಗಡಿಯಲ್ಲಿ ಶಾಂತಿ ಹಾಗೂ ಸ್ಥಿರತೆಯನ್ನು ಕಾಪಾಡಬೇಕಿದೆ ಎಂದು ಹೇಳಿದ್ದಾರೆ. 
SCROLL FOR NEXT