ವಿದೇಶ

ನಮ್ಮ ಹೆಸರು ಬಳಸದೆ, ಸ್ವಂತ ಸಾಮರ್ಥ್ಯದಿಂದ ಚುನಾವಣೆ ಗೆಲ್ಲಿ: ಮೋದಿಗೆ ಪಾಕ್ ಟಾಂಗ್

Srinivasamurthy VN
ಇಸ್ಲಾಮಾಬಾದ್: ಪಾಕಿಸ್ತಾನದ ಹೆಸರು ದುರ್ಬಳಕೆ ಮಾಡಿಕೊಳ್ಳದೇ ನಿಮ್ಮ ಸ್ವಂತ ಸಾಮರ್ಥ್ಯದಿಂದ ಗುಜರಾತ್ ಚುನಾವಣೆ ಗೆಲ್ಲಿ..ಚುನಾವಣಾ ಗೆಲುವಿಗಾಗಿ ಪಾಕಿಸ್ತಾನದ ಹೆಸರು ದುರ್ಬಳಕೆ ಬೇಡ ಎಂದು ಪ್ರಧಾನಿ ನರೇಂದ್ರ  ಮೋದಿಗೆ ಪಾಕಿಸ್ತಾನ ಸರ್ಕಾರ ಟಾಂಗ್ ನೀಡಿದೆ.
ಕಾಂಗ್ರೆಸ್ ಮುಖಂಡರು ಪಾಕಿಸ್ತಾನ ಸರ್ಕಾರ ಮತ್ತು ಐಎಸ್ ಐ ಅಧಿಕಾರಿಗಳೊಂದಿಗೆ ರಹಸ್ಯ ಭೇಟಿ ಮಾಡಿದ್ದರು ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಆರೋಪಕ್ಕೆ ಸಂಬಂಧಿಸಿದಂತೆ ಇದೇ ಮೊದಲ ಬಾರಿಗೆ ಪ್ರತಿಕ್ರಿಯೆ  ನೀಡಿರುವ ಪಾಕಿಸ್ತಾನ ಸರ್ಕಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಿರುಗೇಟು ನೀಡಿದೆ. ಈ ಬಗ್ಗೆ ಪಾಕಿಸ್ತಾನದ ವಿದೇಶಾಂಗ ಇಲಾಖೆಯ ವಕ್ತಾರ ಡಾ. ಮಹಮದ್ ಫೈಸಲ್ ಅವರು ಟ್ವಿಟರ್ ನಲ್ಲಿ ಬರೆದಿದ್ದು, ಪಾಕಿಸ್ತಾನವನ್ನು  ಚುನಾನಪಣಾ ಪ್ರತಾರದಲ್ಲಿ ದುರ್ಬಳಕೆ ಮಾಡುವುದನ್ನು ಭಾರತ ಕೈ ಬಿಡಬೇಕು. ಚುನಾವಣೆಗಳನ್ನು ನಿಮ್ಮ ಸ್ವಂತ ಸಾಮರ್ಥ್ಯದಿಂದ ಗೆಲ್ಲಬೇಕೇ ಹೊರತು ಇದಕ್ಕಾಗಿ ಪಾಕಿಸ್ತಾನದ ಹೆಸರು ದುರ್ಬಳಕೆ ಸರಿಯಲ್ಲ. ಭಾರತದ  ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅಲ್ಲಿನ ರಾಜಕಾರಣಿಗಳ ಪಾಕಿಸ್ತಾನ ಕುರಿತ ಹೇಳಿಕೆಗಳು ಸತ್ಯಕ್ಕೆ ದೂರವಾದದ್ದು, ಮತ್ತು ಬೇಜವಾಬ್ದಾರಿಯುತವಾದದ್ದು ಎಂದು ಕಿಡಿಕಾರಿದ್ದಾರೆ.
ಇತ್ತೀಚೆಗಷ್ಟೇ ಗುಜರಾತ್ ನಲ್ಲಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಮುಖಂಡ ಮಣಿಶಂಕರ್ ಅಯ್ಯರ್ ಅವರ ಮನೆಗೆ ಪಾಕಿಸ್ತಾನದ ರಾಯಭಾರಿಗಳು ಆಗಮಿಸಿ ರಹಸ್ಯ ಸಭೆ ನಡೆಸಿದ್ದರು ಎಂದು  ಆರೋಪಿಸಿದ್ದರು. ಇದಕ್ಕೆ ತಿರುಗೇಟು ನೀಡಿದ್ದ ಕಾಂಗ್ರೆಸ್ ಪಕ್ಷ ಬಿಜೆಪಿ ನಾಯಕರೇ ಪಾಕಿಸ್ತಾನದ ಐಎಸ್ ಐ ನೆರವು ನೀಡುವ ಮೂಲಕ ಪಠಾಣ್ ಕೋಟ್ ವಾಯುನೆಲೆ ಮೇಲೆ ಉಗ್ರ ದಾಳಿಯಾಗುವಂತೆ ಮಾಡಿದ್ದರು ಎಂದು  ತಿರುಗೇಟು ನೀಡಿದ್ದರು.
SCROLL FOR NEXT