ವಿದೇಶ

ಭೂಗತ ಪಾತಕಿ ದಾವೂದ್ ಇಬ್ರಾಹಿಂ ಬಲಗೈ ಭಂಟ ಛೋಟಾ ಶಕೀಲ್ ಸಾವು?

Srinivasamurthy VN
ನವದೆಹಲಿ: ಮುಂಬೈ ಸರಣಿ ಬಾಂಬ್ ಸ್ಫೋಟದ ರೂವಾರಿ ಭೂಗತ ಪಾತಕಿ ದಾವೂಜದ್ ಇಬ್ರಾಹಿಂ ಬಲಗೈ ಭಂಟ ಛೋಟಾ ಶಕೀಲ್ ಸಾವನ್ನಪ್ಪಿದ್ದಾನೆ ಎಂದು ಹೇಳಲಾಗುತ್ತಿದ್ದು, ಈ ಬಗ್ಗೆ ಪಾಕಿಸ್ತಾನ ಗುಪ್ತಚರ ಇಲಾಖೆ ಸ್ಪಷ್ಟನೆ  ನೀಡಿಲ್ಲ.
ಮೂಲಗಳ ಪ್ರಕಾರ ಭಾರತೀಯ ಗುಪ್ತಚರ ಇಲಾಖೆಗೆ ಪಾಕಿಸ್ತಾನದಿಂದ ಎರಡು ದೂರವಾಣಿ ಕರೆಗಳ ಧ್ವನಿ ಮುದ್ರಿಕೆಗಳು ಲಭ್ಯವಾಗಿದ್ದು, ಇದರಲ್ಲಿ ಪಾತಕಿ ಛೋಟಾ ಶಕೀಲ್ ಸಾವಿನ ಕುರಿತಾದ ಅಂಶಗಳು ಅಡಕವಾಗಿವೆ ಎಂದು  ಹೇಳಲಾಗಿದೆ. ಒಂದು ಧ್ವನಿ ಮುದ್ರಿಕೆಯಲ್ಲಿ ಕಳೆದ ಜನವರಿ 6ರಂದೇ ಪಾಕಿಸ್ತಾನದ ಇಸ್ಲಾಮಾಬಾದ್ ನಲ್ಲಿ ಛೋಟಾ ಶಕೀಲ್ ಸಾವನ್ನಪ್ಪಿದ್ದು, ಒಂದು ಮೂಲದ ಪ್ರಕಾರ ಆತ ಹೃದಯಾಘಾತದಿಂದ ಮೃತಪಟ್ಟಿರಬಹುದು ಎಂದು  ಶಂಕಿಸಿದ್ದು, ಆತ ಸಭೆಯಲ್ಲಿ ಕುಸಿದು ಬೀಳುತ್ತಿದ್ದಂತೆಯೇ ಆತನ ಭದ್ರತಾ ಸಿಬ್ಬಂದಿಗಳು ಏರ್ ಆ್ಯಂಬುಲೆನ್ಸ್ ಮೂಲಕ ರಾವಲ್ ಪಿಂಡಿ ಆಸ್ಪತ್ರೆಗೆ ದಾಖಲು ಮಾಡಿದ್ದರು. ಅಷ್ಟು ಹೊತ್ತಿಗಾಗಲೇ ಆತ ಸಾವನ್ನಿಪ್ಪಿದ್ದ ಎಂದು  ಹೇಳಲಾಗಿದೆ.
ಅಂತೆಯೇ ಮತ್ತೊಂದು ವರದಿಯಲ್ಲಿ ಆತ ಪಾಕಿಸ್ತಾನದ ಗುಪ್ತಚರ ಇಲಾಖೆ ಐಎಸ್ ಐ ನಿಂದಲೇ ಹತ್ಯೆಗೀಡಾಗಿದ್ದ ಎಂದು ಹೇಳಲಾಗಿದೆ. ಐಎಸ್ ಐ ಪಾಕಿಸ್ತಾನ ಒಡೆಸ್ಸಾ ನೆರವಿನ ಮೂಲಕ ಛೋಟಾ ಶಕೀಲ್ ನನ್ನು  ಹೊಡೆದುರುಳಿಸಿದೆ. ಆತನ ಮೃತ ದೇಹ ಸಿ-30 ವಿಮಾನದಲ್ಲಿ ಕರಾಚಿಗೆ ರವಾನೆ ಮಾಡಲಾಗಿತ್ತು ಎಂದೂ ವರದಿಯಲ್ಲಿ ತಿಳಿಸಲಾಗಿದೆ. ಅಲ್ಲದೆ ಪಾಕಿಸ್ತಾನದ ರಕ್ಷಣಾ ಇಲಾಖೆಯ ಅಧೀನದಲ್ಲಿರುವ ಸ್ಮಶಾನದಲ್ಲಿ ಆತನನ್ನು ಸಮಾಧಿ  ಮಾಡಲಾಗಿದೆ ಎಂದೂ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಅಲ್ಲದೆ ಶಕೀಲ್ ಸಾವಿನ ಬಳಿಕ ಆತನ ಡಿ -48, 15 ನೇ ಲೇನ್, ಖಯಾಬಾನ್-ಸೆಹರ್, ಡಿ.ಎಚ್.ಎ ಕಾಲೊನೀ ನಿವಾಸದಿಂದ ಆತನ ಕುಟುಂಬವನ್ನು ತೆರವುಗೊಳಿಸಲಾಗಿದ್ದು, ಲಾಹೋರ್ ನಲ್ಲಿರುವ ಐಎಸ್ ಐ ಅಧೀನದ ಮನೆಗೆ  ಸ್ಥಳಾಂತರಗೊಳಿಸಲಾಗಿದೆ ಎಂದು ವರದಿಯಲ್ಲಿ ಶಂಕಿಸಲಾಗಿದೆ. ಮೃತ ಶಕೀಲ್ ಗೆ ಇಬ್ಬರು ಪತ್ನಿಯರು, ಓರ್ವ ಪುತ್ರ, ಇಬ್ಬರು ಪುತ್ರಿಯರು, ಮತ್ತು ಓರ್ಪ ಮೊಮ್ಮಗಳಿದ್ದಳು ಎಂದು ಹೇಳಲಾಗಿದೆ.
SCROLL FOR NEXT