ವಿಶ್ವಸಂಸ್ಥೆ: ಜೆರುಸಲೇಂ ಅನ್ನು ಇಸ್ರೇಲ್ ರಾಜಧಾನಿಯನ್ನಾಗಿ ಘೋಷಣೆ ಮಾಡುವ ಅಮೆರಿಕ ನಿರ್ಧಾರಕ್ಕೆ ವಿಶ್ವಸಂಸ್ಥೆಯೂ ಸೇರಿದಂತೆ ಬಹುತೇಕ ಅದರ ಸದಸ್ಯ ರಾಷ್ಟ್ರಗಳು ವಿರೋಧ ವ್ಯಕ್ತಪಡಿಸಿರುವಂತೆಯೇ ವಿಶ್ವಸಮುದಾಯದ ಎದುರು ಅಮೆರಿಕ ಭಾರಿ ಮುಜುಗರವನ್ನು ಅನುಭವಿಸಿದೆ.
ಒಟ್ಟು 184 ಸದಸ್ಯ ರಾಷ್ಟ್ರಗಳ ಪೈಕಿ ಅಮೆರಿಕ ನಿರ್ಧಾರದ ವಿರುದ್ಧ 128 ರಾಷ್ಚ್ರಗಳು ಮತ ಚಲಾಯಿಸಿದ್ದು, 35 ರಾಷ್ಟ್ರಗಳು ಮತ ಚಲಾಯಿಸಿದೇ ತಟಸ್ಥ ನಿಲುವು ಪ್ರದರ್ಶಿಸಿದ್ದರೆ, 21 ರಾಷ್ಟ್ರಗಳು ಮತದಾನಕ್ಕೇ ಗೈರಾಗುವ ಮೂಲಕ ಅಮೆರಿಕಕ್ಕೆ ಭಾರಿ ಹಿನ್ನಡೆಯುಂಟಾಗುವಂತೆ ಮಾಡಿವೆ. ಆ ಮೂಲಕ ವಿಶ್ವಸಂಸ್ಥೆಯಲ್ಲಿ ಇದೇ ಮೊದಲ ಬಾರಿಗೆ ಎಂಬಂತೆ ಅಮೆರಿಕ ತನ್ನ ವೀಟೋ ಅಧಿಕಾರ ಚಲಾವಣೆ ಹೊರತಾಗಿಯೂ ಏಕಾಂಗಿಯಾಗಿದ್ದು, ಭಾರಿ ಮುಜುಗರವನ್ನು ಅನುಭವಿಸಿದೆ.
ಇನ್ನು ಈ ಭಾರಿ ಮುಜುಗರಕ್ಕೆ ಸಂಬಂಧಿಸಿದಂತೆ ಅಮೆರಿಕದ ವಿಶ್ವಸಂಸ್ಥೆ ಪ್ರತಿನಿಧಿ ನಿಕ್ಕಿ ಹ್ಯಾಲೆ ಅವರು, ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ದಿನವನ್ನು ಅಮೆರಿಕ ಎಂದಿಗೂ ಮರೆಯುವುದಿಲ್ಲ. ದೇಶದ ಸಾರ್ವಭೌಮತೆಯ ರಕ್ಷಣೆ ನಮ್ಮ ಹಕ್ಕು. ಹಲವು ರಾಷ್ಟ್ರಗಳ ತಮ್ಮ ಏಳಿಗೆಗಾಗಿ ಅಮೆರಿಕವನ್ನು ಬಳಸಿಕೊಂಡಿವೆ. ಇನ್ನು ಮುಂದೆ ನೆರವು ಕೋರಿ ರಾಷ್ಟ್ರಗಳು ಅಮೆರಿಕ ಬಳಿ ಬಂದಾಗ ನಾವು ಈ ದಿನವನ್ನು ನೆನಪಿಸಿಕೊಳ್ಳುತ್ತೇವೆ ಎಂದು ನಿಕ್ಕಿ ಹ್ಯಾಲೆ ಖಾರವಾಗಿ ಹೇಳಿದ್ದಾರೆ.
ಅಂತೆಯೇ ಈ ಮತದಾನ ಫಲಿತಾಂಶವನ್ನು ಅಮೆರಿಕ ತನಗಾದ ಅಗೌರವ ಎಂದು ಪರಿಗಣಿಸುತ್ತದೆ. ಆದರೆ ಈಗಲೂ ನಮ್ಮ ನಿರ್ಧಾರಕ್ಕೆ ನಾವು ಬದ್ಧರಾಗಿದ್ದು, ಮತದಾನ ಫಲಿತಾಂಶ ಅಮೆರಿಕದ ನಿಲುವಿನ ಮೇಲೆ ಯಾವುದೇ ರೀತಿಯ ಪರಿಣಾಮ ಬೀರದು ಎಂದು ನಿಕ್ಕಿ ಹ್ಯಾಲೆ ಸ್ಪಷ್ಟಪಡಿಸಿದ್ದಾರೆ. ಇನ್ನು ವಿಶ್ವಸಂಸ್ಥೆಗೆ ಅಮೆರಿಕ ನೀಡುತ್ತಿರುವ ಆರ್ಥಿಕ ನೆರವನ್ನೂ ಕೂಡ ಕಡಿತಗೊಳಿಸುವ ಕುರಿತು ನಿಕ್ಕಿ ಹ್ಯಾಲೆ ಸ್ಪಷ್ಟ ಸಂದೇಶ ನೀಡಿದ್ದು, ಮುಂದಿನ ದಿನಗಳಲ್ಲಿ ಅಮೆರಿಕ ಸರ್ಕಾರ ಈ ಬಗ್ಗೆ ಗಂಭೀರ ಚಿಂತನೆ ನಡೆಸಲಿದೆ ಎಂದು ನಿಕ್ಕಿ ಹ್ಯಾಲೆ ಹೇಳಿದ್ದಾರೆ.
ಇನ್ನು ಅಚ್ಚರಿ ವಿಚಾರವೆಂದರೆ ಅಮೆರಿಕದ ಹಲವು ಮಿತ್ರ ರಾಷ್ಟ್ರಗಳು ವಿರುದ್ಧ ಮತದಾನ ಮಾಡಿವೆ. ಇನ್ನು ಮೆಕ್ಸಿಕೋ, ಕೆನಡಾ, ಆಸ್ಟ್ರೇಲಿಯಾ, ಅರ್ಜೆಂಟೀನಾದಂತಹ ಅಮೆರಿಕ ಮಿತ್ರ ರಾಷ್ಟ್ರಗಳು ಮತದಾನದಿಂದ ದೂರ ಉಳಿದಿದ್ದವು.