ವಿದೇಶ

ಕಾಬುಲ್ ನಲ್ಲಿ ಭೀಕರ ಆತ್ಮಹತ್ಯಾ ಸ್ಫೋಟ, ಕನಿಷ್ಟ 40 ಸಾವು, ಹಲವರಿಗೆ ಗಾಯ

Srinivasamurthy VN
ಕಾಬುಲ್: ಆಫ್ಘಾನಿಸ್ತಾನ ರಾಜಧಾನಿ ಕಾಬುಲ್ ನಲ್ಲಿ ಗುರುವಾರ ನಡೆದ ಭೀಕರ ಭಯೋತ್ಪಾದನಾ ದಾಳಿಯಲ್ಲಿ ಕನಿಷ್ಛ 40 ಮಂದಿ ಸಾವಿಗೀಡಾಗಿ ನೂರಾರು ಮಂದಿ ಗಾಯಗೊಂಡಿದ್ದಾರೆ.
ಕಾಬುಲ್ ನ ಟೆಬಿಯಾನ್ ಸಾಮಾಜಿಕ-ಸಾಂಸ್ಕೃತಿಕ ಚಟುವಟಿಕೆಗಳ ಕೇಂದ್ರದಲ್ಲಿ ಇಂದು ಉಗ್ರರು ತಮ್ಮ ಅಟ್ಟಹಾಸ ಮೆರೆದಿದ್ದು, ಆತ್ಮಹತ್ಯಾ ದಾಳಿಕೋರನೋರ್ವ ತುಂಬಿದ ಸಭೆಯಲ್ಲಿ ತನ್ನನು ತಾನು ಸ್ಫೋಟಿಸಿಕೊಳ್ಳುವ  ಮೂಲಕ 40 ಮಂದಿಯ ಸಾವಿಗೆ ಕಾರಣನಾಗಿದ್ದಾನೆ. ಘಟನೆಯಲ್ಲಿ ಹಲವರು ಗಾಯಗೊಂಡಿದ್ದು, ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಪಾಕಿಸ್ತಾನದ ಸುದ್ದಿ ಸಂಸ್ಥೆ ಅಲ್ ಜಜೀರಾ ವರದಿ ಮಾಡಿರುವಂತೆ ಆಫ್ಘಾನಿಸ್ತಾನದ ಸುದ್ದಿ ವಾಹಿನಿ ಆಫ್ಘನ್ ವಾಯ್ಸ್ ಕಚೇರಿಯ ಸಮೀಪದಲ್ಲಿರುವ  ಟೆಬಿಯಾನ್ ಸಾಮಾಜಿಕ-ಸಾಂಸ್ಕೃತಿಕ ಚಟುವಟಿಕೆಗಳ ಕೇಂದ್ರದಲ್ಲಿ ಉಗ್ರರು  ದಾಳಿ ಮಾಡಿದ್ದು, ತಮ್ಮನ್ನು ತಾವು ಸ್ಫೋಟಿಸಿಕೊಂಡಿದ್ದಾರೆ. ಉಗ್ರ ದಾಳಿಯ ವೇಳೆ ಆಲ್ಲಿ ಸುಮಾರು 500ಕ್ಕೂ ಅಧಿಕ ಮಂದಿ ಸೇರಿದ್ದರು ಎಂದು ವರದಿ ಮಾಡಿದೆ. ಘಟನೆಯಲ್ಲಿ ಸುದ್ದಿ ಸಂಸ್ಥೆಯ ಕಚೇರಿ ಹಾಗು ಪತ್ರಕರ್ತರಿಗೆ  ತೊಂದರೆ ಅಥವಾ ಸಾವುನೋವುಗಳಾದ ಕುರಿತು ವರದಿಯಾಗಿಲ್ಲ. 
ಘಟನೆಯನ್ನು ಆಫ್ಘಾನಿಸ್ತಾನ ಪತ್ರಕರ್ತರ ಸಂಘ ಕಟು ಶಬ್ದಗಳಿಂದ ಖಂಡಿಸಿದ್ದು, ಸೂಕ್ತ ಭದ್ರತೆ ಕೈಗೊಳ್ಳುವಂತೆ ಆಪ್ಘನ್ ಸರ್ಕಾರಕ್ಕೆ ಆಗ್ರಹಿಸಿದೆ. ಇನ್ನು ದಾಳಿ ಸಂಬಂಧ ಯಾವುದೇ ಉಗ್ರ ಸಂಘಟನೆ ಹೊಣೆ ಹೊತ್ತಿಲ್ಲ. ಸ್ಥಳೀಯ  ತಾಲಿಬಾನ್ ಸಂಘಟನೆ ಕೂಡ ದಾಳಿಯನ್ನು ತಾನು ನಡೆಸಿಲ್ಲ ಎಂದು ಸ್ಪಷ್ಟಪಡಿಸಿದೆ.
SCROLL FOR NEXT