ಬೀಜಿಂಗ್: ಡೊನಾಲ್ಡ್ ಟ್ರಂಪ್ ಅಮೆರಿಕ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಚೀನಾ ಅಮೆರಿಕಾದ ಎದುರು ಶಕ್ತಿ ಪ್ರದರ್ಶನಕ್ಕೆ ಮುಂದಾಗಿರುವ ಸೂಚನೆ ನೀಡಿದ್ದು, ಏಕಕಾಲಕ್ಕೆ 10 ಅಣ್ವಸ್ತ್ರ ಸಿಡಿತಲೆಗಳನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿರುವ ಕ್ಷಿಪಣಿಯ ಪರೀಕ್ಷೆ ನಡೆಸಿದೆ.
10 ಪ್ರದೇಶಗಳನ್ನು ಗುರಿಯಾಗಿರಿಸಿಕೊಂಡು ದಾಳಿನಡೆಸುವ ಸಾಮರ್ಥ್ಯವಿರುವ ಡಿಎಫ್-5ಸಿ ಕ್ಷಿಪಣಿ ಪರೀಕ್ಷೆಯ ಬಗ್ಗೆ ಅಮೆರಿಕಾದ ಗುಪ್ತಚರ ಸಂಸ್ಥೆಗಳು ಮಾಹಿತಿ ಪಡೆದಿವೆ ಎಂದು ವಾಷಿಂಗ್ ಟನ್ ನ ಪತ್ರಿಕೆಯೊಂದು ವರದಿ ಮಾಡಿದೆ. ಶಾಂಕ್ಸಿ ಪ್ರಾಂತ್ಯದ ಬಾಹ್ಯಾಕಾಶ ಉಡಾವಣಾ ಕೇಂದ್ರದಲ್ಲಿ ನಿಷ್ಕ್ರಿಯ ಅಣ್ವಸ್ತ್ರ ಸಿಡಿತಲೆಗಳನ್ನಿಟ್ಟು ಕ್ಷಿಪಣಿಯನ್ನು ಪರೀಕ್ಷಾರ್ಥ ಉಡಾವಣೆ ಮಾಡಿದ್ದು, ಡಿಎಫ್-5ಸಿ 1980 ರಲ್ಲಿ ಸೇನೆಗೆ ಸೇರ್ಪಡೆಯಾಗಿದ್ದ ಡಿಎಫ್-5 ಅಣ್ವಸ್ತ್ರ ವಾಹಕ ಕ್ಷಿಪಣಿಯ ಮುಂದುವರಿದ, ಅಭಿವೃದ್ಧಿಗೊಂಡ ಮಾದರಿಯಾಗಿದೆ.
ಚೀನಾದ ಪಿಎಲ್ಎ(ಸೇನೆ) ಗೆ ಸಂಬಂಧಿಸಿದ ಬೆಳವಣಿಗೆಗಳ ಬಗ್ಗೆ ಅಮೆರಿಕಾದ ರಕ್ಷಣಾ ಇಲಾಖೆ ನಿಗಾ ಇಟ್ಟಿದೆ. ಚೀನಾದ ಶಸ್ತ್ರಾಗಾರದಲ್ಲಿ 250 ಅಣ್ವಸ್ತ್ರ ಸಿಡಿತಲೆಗಳಿದ್ದು, 10 ಅಣ್ವಸ್ತ್ರ ಸಿಡಿತಲೆಗಳನ್ನು ಏಕಕಾಲಕ್ಕೆ ಉಡಾಯಿಸುವ ಸಾಮರ್ಥ್ಯದ ಕ್ಷಿಪಣಿ ಪ್ರಯೋಗದ ನಂತರ ಶಸ್ತ್ರಾಗರದಲ್ಲಿರುವ ಅಣ್ವಸ್ತ್ರ ಸಿಡಿತಲೆಗಳ ಸಂಖ್ಯೆ ಹೆಚ್ಚಿರಬಹುದು ಎಂಬುದು ಅಮೆರಿಕದ ಸಧ್ಯದ ಲೆಕ್ಕಾಚಾರವಾಗಿದೆ.
ಹೊಸ ಮಾದರಿಯ ಕ್ಷಿಪಣಿ ಪ್ರಯೋಗ ನಡೆಸುವುದರ ಜೊತೆಯಲ್ಲಿಯೇ, ಚೀನಾ ಡಿಎಫ್-5 ಸಿ ಕ್ಷಿಪಣಿಗೂ ಅಣ್ವಸ್ತ್ರಗಳನ್ನು ಸೇರಿಸುವ ಕಾರ್ಯವನ್ನು ಪ್ರಾರಂಭಿಸಿದ್ದು, ದಕ್ಷಿಣ ಚೀನಾ ಸಮುದ್ರ, ವ್ಯಾಪಾರ ವಹಿವಾಟು ಅಸಮತೋಲನ ಸೇರಿದಂತೆ ಹಲವು ವಿಷಯಗಳಲ್ಲಿ ತನ್ನೊಂದಿಗೆ ವಿವಾದ ಹೊಂದಿರುವ ಅಮೆರಿಕಾದ ಎದುರು ಚೀನಾ ಶಕ್ತಿ ಪ್ರದರ್ಶನಕ್ಕೆ ಮುಂದಾಗಿರುವ ಸೂಚನೆಯಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics