ವಿದೇಶ

'ಮಿ. ಟ್ರಂಪ್, ೨೪ ಘಂಟೆ ಅನ್ನ ನೀರಿಲ್ಲದೆ ನೀವು ಎಂದಾದರೂ ಬದುಕಿದ್ದೀರಾ?': ಸಿರಿಯಾ ಬಾಲಕಿ ಪ್ರಶ್ನೆ

Guruprasad Narayana
ಡಮಾಸ್ಕಸ್: ಯುದ್ಧದಿಂದ ಜರ್ಜರಿತವಾಗಿರುವ ಸಿರಿಯಾದ ಅಲೆಪ್ಪೋಇನ್ ನಗರದ ಏಳು ವರ್ಷದ ಬಾಲಕಿ ಬಾನ ಅಲಬೇದ್ ಟ್ವಿಟ್ಟರ್ ನಲ್ಲಿ ಕೇಳಿರುವ ಪ್ರಶ್ನೆ ವಿಶ್ವದ ಗಮನ ಸೆಳೆದಿದೆ. ಈ ಹೊಸ ವಿಡಿಯೋದಲ್ಲಿ ಅವರು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಪ್ರಶ್ನಿಸಿದ್ದಾರೆ. 
"೨೪ ಘಂಟೆಗಳ ಕಾಲ ಅನ್ನ ನೀರಿಲ್ಲದೆ ನೀವು ಎಂದಾದರೂ ಬದುಕಿದ್ದೀರಾ? ನಿರಾಶ್ರಿತರು ಮತ್ತು ಸಿರಿಯಾ ಮಕ್ಕಳ ಬಗ್ಗೆ ಸ್ವಲ್ಪ ಚಿಂತಿಸಿ" ಎಂದು ಟ್ವಿಟ್ಟರ್ ನಲ್ಲಿ ಅಲಬೇದ್ ಕೇಳಿದ್ದಾರೆ. 
ಈ ಹಿಂದೆ ಟ್ರಂಪ್ ವಲಸೆ ನಿಷೇಧದ ಬಗ್ಗೆ ಟ್ರಂಪ್ ಮಾಡಿದ್ದ "ನಮ್ಮ ದೇಶದಿಂದ ಕೆಟ್ಟ ಜನರನ್ನು (ಕೆಟ್ಟ ಚಿಂತನೆಗಳುಳ್ಳ) ಹೊರಗಿಡುವುದು ಉದ್ದೇಶ" ಎಂಬ ಟ್ವೀಟ್ ಗೆ ಅಲಬೇದ್ ಪ್ರತಿಕ್ರಿಯಿಸಿದ್ದು "ನಾನು ಭಯೋತ್ಪಾದಕಿಯೇ? "ಎಂದು ಪ್ರಶ್ನಿಸಿದ್ದಾರೆ. 
ಸಿರಿಯಾ ಒಳಗೊಂಡಂತೆ ಏಳು ಮುಸ್ಲಿಂ ರಾಷ್ಟ್ರಗಳಿಂದ ವಲಸೆ ನಿಷೇಧಿಸಿ ಆದೇಶಕ್ಕೆ ಇತ್ತೀಚಿಗಷ್ಟೇ ಟ್ರಂಪ್ ಸಹಿ ಮಾಡಿದ್ದು ಇದು ವಿಶ್ವದಾದ್ಯಂತ ವ್ಯಾಪಕ ಟೀಕೆಗೆ ಗುರಿಯಾಗಿತ್ತು. 
ಈ ನಿಷೇಧದ ನಂತರ ಟ್ವೀಟ್ ಮಾಡಿದ್ದ ಅಲಬೇದ್ "ಪ್ರಿಯ ಟ್ರಂಪ್, ನಿರಾಶ್ರಿತರನ್ನು ನಿಷೇಧಿಸುವುದು ಅತಿ ಕೆಟ್ಟದ್ದು. ಸರಿ, ಇದು ಒಳ್ಳೆಯದಾದ್ದರೆ, ನಿಮಗೊಂದು ಐಡಿಯಾ ಇದೆ. ಇತರ ರಾಷ್ಟ್ರಗಳಲ್ಲಿ ಶಾಂತಿ ನೆಲಸುವಂತೆ ಮಾಡಿ" ಎಂದು ಬರೆದಿದ್ದಳು. 
ಯುದ್ಧ ಜರ್ಜರಿತ ಸಿರಿಯಾ ನಗರ ಅಲೆಪ್ಪೋದಲ್ಲಿನ ದುರ್ಭರ ಜೀವನದ ಬಗ್ಗೆ ಬರೆದು, ಸಹಾಯಕ್ಕಾಗಿ ತನ್ನ ತಾಯಿ ಫಾಥೇಮಾ ಅವರೊಂದಿಗೆ ಅಲಬೇದ್ ಸರಣಿ ಟ್ವೀಟ್ ಮಾಡುತ್ತಿದ್ದು ಇದು ಜಾಗತಿಕವಾಗಿ ಜನರು ನಿರಾಶ್ರಿತರ ಬಗ್ಗೆ ಚಿಂತಿಸುವಂತೆ ಪ್ರೇರೇಪಿಸಿದೆ. 
ಯುದ್ಧದಿಂದಾಗಿ ತಮ್ಮ ಮನೆ ನಾಶವಾಗಿದ್ದನ್ನು ಟ್ವಿಟ್ಟರ್ ನಲ್ಲಿ ಬರೆದುಕೊಂಡಾಗಿಲಿಂದಲೂ ಅಲಬೇದ್ ಮತ್ತು ಅವರ ತಾಯಿಯನ್ನು ಸಾಮಾಜಿಕ ಮೈಕ್ರೋ ಬ್ಲಾಗಿಂಗ್ ತಾಣದಲ್ಲಿ ಸೆಪ್ಟೆಂಬರ್ ೨೦೧೬ ರಿಂದ ೩,೬೬,೦೦೦ ಜನ ಹಿಂಬಾಲಿಸುತ್ತಿದ್ದಾರೆ. 
SCROLL FOR NEXT