ಅಬುಧಬಿ: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುಸ್ಲಿಮರು ಬಹುಸಂಖ್ಯಾತರಾಗಿರುವ 7 ಇಸ್ಲಾಮಿಕ್ ರಾಷ್ಟ್ರಗಳ ಪ್ರಜೆ/ ನಿರಾಶ್ರಿತರಿಗೆ ಅಮೆರಿಕ ಪ್ರವೇಶ ನಿರ್ಬಂಧಿಸಿರುವುದು ಮುಸ್ಲಿಂ ವಿರೋಧಿ ಆದೇಶವಲ್ಲ ಎಂದು ಯುನೈಟೆಡ್ ಅರಬ್ ಎಮಿರೇಟ್ಸ್ ಸಮರ್ಥಿಸಿಕೊಂಡಿದೆ.
ಟ್ರಂಪ್ ತಮ್ಮ ಸಾರ್ವಭೌಮತ್ವದ ಹಕ್ಕುಗಳ ವ್ಯಾಪ್ತಿಯನ್ನು ಮೀರದೇ ಆದೇಶ ಹೊರಡಿಸಿದ್ದಾರೆ. ಆದರೆ ಅದನ್ನು ನಿರ್ದಿಷ್ಟ ಜನಾಂಗ, ಗುಂಪಿನ ವಿರುದ್ಧ ಎಂದು ಹೇಳುವುದು ಸರಿಯಲ್ಲ ಎಂದು ಅಬುಧಬಿಯಲ್ಲಿ ನಡೆದ ಅರಬ್-ರಷ್ಯನ್ ಸಹಕಾರ ವೇದಿಕೆಯ ಕಾರ್ಯಕ್ರಮದಲ್ಲಿ ಮಾತನಾಡಿರುವ ಯುಎಇ ವಿದೇಶಾಂಗ ಸಚಿವರು ಅಭಿಪ್ರಾಯಪಟ್ಟಿದ್ದಾರೆ.
ಅಮೆರಿಕ ಅಧ್ಯಕ್ಷರು ಮುಸ್ಲಿಮರನ್ನು ಗುರಿಯಾಗಿರಿಸಿಕೊಂಡು ಆದೇಶ ನೀಡಿಲ್ಲ ಎಂದು ವಿದೇಶಾಂಗ ಸಚಿವ ಶೇಖ್ ಅಬ್ದುಲ್ಲಾ ಸ್ಪಷ್ಟವಾಗಿ ಹೇಳಿದ್ದು, ಬಹುತೇಕ ಮುಸ್ಲಿಂ ರಾಷ್ಟ್ರಗಳಿಗೆ ಅಮೆರಿಕ ಆದೇಶದಿಂದ ಯಾವುದೇ ಸಮಸ್ಯೆ ಇಲ್ಲ ಎಂದಿದ್ದಾರೆ. ಡೊನಾಲ್ಡ್ ಟ್ರಂಪ್ ಹೊರಡಿಸಿರುವ ಆದೇಶ ತಾತ್ಕಾಲಿಕವಾದದ್ದು ಎಂಬುದನ್ನು ನಾವು ಪರಿಗಣಿಸಬೇಕು. ಅಷ್ಟೇ ಅಲ್ಲದೇ 7 ರಾಷ್ಟ್ರಗಳು ಅಮೆರಿಕಾಗೆ ಸಂಬಂಧಿಸಿದಂತೆ ಹಲವು ಸವಾಲುಗಳನ್ನು ಎದುರಿಸುತ್ತಿದ್ದು, ಶೀಘ್ರವೇ ಅವುಗಳನ್ನು ಬಗೆಹರಿಸಿಕೊಳ್ಳಬೇಕಿದೆ ಎಂದು ಶೇಖ್ ಅಬ್ದುಲ್ಲಾ ಅಭಿಪ್ರಾಯಪಟ್ಟಿದ್ದಾರೆ.