ಜೇಟ್ಲಿ ಬಜೆಟ್ ಗೆ ಅಮೆರಿಕಾದ ಉದ್ಯಮ ವಲಯದ ಮೆಚ್ಚುಗೆ
ವಾಷಿಂಗ್ ಟನ್: ಫೆ.1 ರಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಮಂಡಿಸಿದ 2017-18 ನೇ ಸಾಲಿನ ಬಜೆಟ್ ನ್ನು ಅಮೆರಿಕಾದ ಉದ್ಯಮ ವಲಯ ದೂರದೃಷ್ಟಿಯ ಬಜೆಟ್ ಎಂದು ಬಣ್ಣಿಸಿದ್ದು, ಕಳೆದ 3 ವರ್ಷಗಳ ಅವಧಿಯಲ್ಲಿ ಜಾರಿಗೆ ತರಲಾದ ಆರ್ಥಿಕ ಸುಧಾರಣೆಗಳನ್ನು ಈ ಬಜೆಟ್ ಅಭಿವೃದ್ಧಿಪಡಿಸುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿವೆ.
ಜಾಗತಿಕ ಆರ್ಥಿಕತೆಯಲ್ಲಿ ಅನಿಶ್ಚಿತತೆ ಉಂಟಾಗಿದ್ದು, ಬಜೆಟ್ ಗಳನ್ನು ಜಾರಿಗೊಳಿಸುವುದಕ್ಕೆ ಹಲವು ಸವಾಲುಗಳಿರುತ್ತವೆ, ಆದರೆ ಅರುಣ್ ಜೇಟ್ಲಿ ಅವರು ದೂರದೃಷ್ಟಿ ಹೊಂದಿರುವ ಬಜೆಟ್ ನ್ನು ಮಂಡಿಸಿದ್ದು ಶ್ಲಾಘನೀಯ ಎಂದು ಅಮೆರಿಕ-ಭಾರತ ಉದ್ಯಮ ಪರಿಷತ್( ಯುಎಸ್ಐಬಿಸಿ) ಅಧ್ಯಕ್ಷ ಮುಖೇಶ್ ಆಘಿ ಹೇಳಿದ್ದಾರೆ.
ಸ್ಕಿಲ್ ಇಂಡಿಯಾ, ಉದ್ಯಮ ಸ್ಥಾಪನೆಯನ್ನು ಸರಳೀಕರಣಗೊಳಿಸುವುದು, ನೋಟು ನಿಷೇಧದಿಂದ ಉಂಟಾಗಿರುವ ಪರಿಣಾಮಗಳನ್ನು ಕಡಿಮೆಗೊಳಿಸುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಾರಂಭಿಸಿದ ಸುಧಾರಣಾ ಕ್ರಮಗಳನ್ನು ಅರುಣ್ ಜೇಟ್ಲಿ ಅವರ ಬಜೆಟ್ ದ್ವಿಗುಣಗೊಳಿಸಲಿದೆ ಕೈಗೆಟುಕುವ ದರದಲ್ಲಿ ಎಲ್ಲರೂ ಮನೆ ಹೊಂದುವುದು ಸಾಧ್ಯವಾಗುವಂತೆ ಮಾಡಲು ಘೋಷಿಸಲಾಗಿರುವ ಯೋಜನೆಗಳನ್ನು ಅಮೆರಿಕ-ಭಾರತ ಉದ್ಯಮ ಪರಿಷತ್ (ಯುಎಸ್ಐಬಿಸಿ) ಸ್ವಾಗತಿಸುತ್ತದೆ ಎಂದು ಮುಖೇಶ್ ಆಘಿ ಹೇಳಿದ್ದಾರೆ.