ಇಸ್ಲಾಮಾಬಾದ್: ಹಿಂದೂ ಮಹಾಸಾಗರದಲ್ಲಿ ಅಣ್ವಸ್ತ್ರ ಶಕ್ತಿ ಹೆಚ್ಚುತ್ತಿರುವುದರ ಬಗ್ಗೆ ಪಾಕಿಸ್ತಾನ ಆತಂಕ ವ್ಯಕ್ತಪಡಿಸಿದ್ದು, ಭಾರತದಿಂದ ಹೆಚ್ಚುತ್ತಿರುವ ಅಣ್ವಸ್ತ್ರ ಶಕ್ತಿಯ ಅಪಾಯಗಳನ್ನು ನಿಗ್ರಹಿಸುವುದಾಗಿ ವಿಶ್ವಾಸ ವ್ಯಕ್ತಪದಿಸಿದೆ.
ವಿದೇಶಿ ಸೇನೆಯ ಸೇನಾ ಬಲ, ಸಮೂಹ ನಾಶಕ ಶಸ್ತ್ರಾಸ್ತ್ರಗಳ ಪ್ರಸರಣ, ಕ್ಷಿಪಣಿ ಶಕ್ತಿ ಹೆಚ್ಚುತ್ತಿರುವುದು ಹಿಂದೂ ಮಹಾಸಾಗರದಲ್ಲಿ ಶಾಂತಿಗೆ ಧಕ್ಕೆ ಉಂಟು ಮಾಡುತ್ತಿದೆ. ಇದರೊಂದಿಗೆ ಅಕ್ರಮ ಮೀನುಗಾರಿಕೆ, ಮಾನವ ಕಳ್ಳ ಸಾಗಣೆ, ಶಸ್ತ್ರಾಸ್ತ್ರ ಕಳ್ಳ ಸಾಗಣೆ ಹವಾಮಾನ ಬದಲಾವಣೆ ಸೇರಿದಂತೆ ಹಲವು ಸಮಸ್ಯೆಗಳೂ ಎದುರಾಗಿದ್ದು ಪಾಕಿಸ್ತಾನ ಅವುಗಳನ್ನು ಸಮರ್ಥವಾಗಿ ಎದುರಿಸಲಿದೆ ಎಂದು ಪಾಕ್ ನ ವಿದೇಶಾಂಗ ಇಲಾಖೆ ಸಲಹೆಗಾರ ಸರ್ತಾಜ್ ಅಜೀಜ್ ಹೇಳಿದ್ದಾರೆ.
ಮೇಲಿನ ಎಲ್ಲಾ ಆತಂಕಗಳೂ ಮುಂಬರುವ ದಿನಗಳಲ್ಲಿ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ ಎಂದು ಹಿಂದೂ ಮಹಾಸಾಗರಕ್ಕೆ ಸಂಬಂಧಿಸಿದಂತೆ ಆಯೋಜಿಸಲಾಗಿದ್ದ ಅಂತಾರಾಷ್ಟ್ರೀಯ ಕಡಲ ಕಾನ್ಫರೆನ್ಸ್ ನಲ್ಲಿ ಹೇಳಿದ್ದು, ಹಿಂದೂ ಮಹಾಸಾಗರ ಪ್ರದೇಶದ ಭದ್ರತಾ ಹಾಗೂ ಶಾಂತಿಯ ವಿಷಯದಲ್ಲಿ ಪಾಕಿಸ್ತಾನ ಪ್ರಮುಖ ಕಾರ್ಯತಂತ್ರ ಪಾಲುದಾರಿಕೆ ಹೊಂದಿದೆ ಎಂದು ಸರ್ತಾಜ್ ಅಜೀಜ್ ಹೇಳಿದ್ದಾರೆ.