ಇಸ್ಲಾಮಾಬಾದ್: ಚೀನಾ-ಪಾಕಿಸ್ತಾನ ಎಕಾನಾಮಿಕ್ ಕಾರಿಡಾರ್ ಯೋಜನೆಯಲ್ಲಿ ಹೂಡಿಕೆ ಮಾಡಲು ಯುಎಇಗೆ ಪಾಕಿಸ್ತಾನ ಆಹ್ವಾನ ನೀಡಿದೆ.
ಆಹ್ವಾನ ನೀಡಿರುವುದನ್ನು ಸ್ಪಷ್ಟಪಡಿಸಿರುವ ಅರಬ್ ನಲ್ಲಿರುವ ಪಾಕಿಸ್ತಾನದ ರಾಯಭಾರಿ ಮೊಝಾಮ್ ಅಹ್ಮದ್ ಖಾನ್, ಸಿಪಿಇಸಿಯಿಂದ ಹೂಡಿಕೆ ಮಾಡಿದರೆ ಪಾಕಿಸ್ತಾನ, ಯುಎಇ ಎರಡೂ ರಾಷ್ಟ್ರಗಳಿಗೆ ಒಳಿತಾಗಲಿದೆ. ಅಷ್ಟೇ ಅಲ್ಲದೇ ಪಾಕಿಸ್ತಾನದ 2025 ವಿಷನ್ ಗೆ ಸಹಕಾರಿಯಾಗಲಿದೆ ಎಂದು ಹೇಳಿದ್ದಾರೆ.
ಮೂಲಸೌಕರ್ಯ ಅಭಿವೃದ್ಧಿಗೆ ಪಾಕಿಸ್ತಾನ ಹಾಗೂ ಚೀನಾ ಜೊತೆಗೂಡಿ ಕಾರ್ಯನಿರ್ವಹಿಸುತ್ತಿದ್ದು, ಇಂಧನ, ವಿದ್ಯುತ್ ಕ್ಷೇತ್ರದಲ್ಲಿ ಎರಡೂ ರಾಷ್ಟ್ರಗಳು ಹಣ ಹೂಡುತ್ತಿವೆ ಎಂದು ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ. ಯುಎಇಗೆ ಸಿಪಿಇಸಿಯಲ್ಲಿ ಹೂಡಿಕೆ ಮಾಡುವುದು ಒಳ್ಳೆಯ ಅವಕಾಶವಾಗಿದೆ ಎಂದು ಪಾಕ್ ರಾಯಭಾರಿ ಮೊಝಾಮ್ ಅಹ್ಮದ್ ಖಾನ್ ಹೇಳಿದ್ದಾರೆ.