ವಿದೇಶ

ಡೊನಾಲ್ಡ್ ಟ್ರಂಪ್ ಆಡಳಿತ ಸೇರಲಿರುವ ಫಾಕ್ಸ್ ನ್ಯೂಸ್ ಆಂಕರ್?

Srinivas Rao BV
ವಾಷಿಂಗ್ ಟನ್: ಫಾಕ್ಸ್ ನ್ಯೂಸ್ ಆಂಕರ್ ಹೀದರ್ ನೌರ್ಟ್ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಡಳಿತಕ್ಕೆ ಸೇರ್ಪಡೆಯಾಗುವ ಸಾಧ್ಯತೆ ದಟ್ಟವಾಗಿದೆ. 
ಟ್ರಂಪ್ ಆಡಳಿತ ಸೇರುವ ಬಗ್ಗೆ ಮಾತುಕತೆ ನಡೆಯುತ್ತಿದ್ದು, ಸಚಿವ ರೆಕ್ಸ್ ಟಿಲ್ಲರ್ಸನ್ ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಫಾಕ್ಸ್ ನ್ಯೂಸ್ ನ ನಿರೂಪಕಿಯಾಗಿರುವ ಹೀದರ್ ಕಳೆದ ವಾರ ಶ್ವೇತ ಭವನಕ್ಕೆ ಆಗಮಿಸಿ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. 1996 ರಿಂದ ಫಾಕ್ಸ್ ನ್ಯೂಸ್ ನಲ್ಲಿ ಕಾರ್ಯನಿರ್ವಹಿಸಿರುವ ಹೀದರ್ ಪ್ರಸ್ತುತ ಫಾಕ್ಸ್ ಆಂಡ್ ಫ್ರೆಂಡ್ಸ್ ಎಂಬ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದಾರೆ. 
ಇದೇ ಕಾರ್ಯಕ್ರಮದ ಬಗ್ಗೆ ಕೆಲವು ದಿನಗಳ ಹಿಂದೆ ಮಾತನಾಡಿದ್ದ ಡೊನಾಲ್ಡ್ ಟ್ರಂಪ್, ಫಾಕ್ಸ್ ಆಂಡ್ ಪ್ರೆಂಡ್ಸ್ ಬೆಳಗಿನ ಅತ್ಯಂತ ಪ್ರಾಮಾಣಿಕ ಕಾರ್ಯಕ್ರಮ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಫಾಕ್ಸ್ ನ್ಯೂಸ್ ಚಾನೆಲ್ ನ ವಿಶ್ಲೇಷಕರಾಗಿದ್ದ ಮೋನಿಕಾ ಕ್ರೌಲೀ ಅವರು ಇತ್ತೀಚೆಗಷ್ಟೇ ಕಾರ್ಯತಂತ್ರದ ಸಂವಹನಗಳ ಹಿರಿಯ ನಿರ್ದೇಶಕರ ಹುದ್ದೆಗೆ ನೇಮಕಗೊಳ್ಳುವ ಮೂಲಕ ಟ್ರಂಪ್ ಆಡಳಿತ ಸೇರ್ಪಡೆಗೊಂಡಿದ್ದರು. ಆದರೆ ಕೃತಿಚೌರ್ಯದ ಆರೋಪದ ಹಿನ್ನೆಲೆಯಲ್ಲಿ ಆ ಹುದ್ದೆಗೆ ರಾಜೀನಾಮೆ ನೀಡಿದ್ದರು. ಈಗ ಫಾಕ್ಸ್ ನ್ಯೂಸ್ ನ ನಿರೂಪಕಿ ಟ್ರಂಪ್ ಆಡಳಿತದ ಭಾಗವಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. 
SCROLL FOR NEXT