ವಿದೇಶ

ಉಗ್ರ ಹಫೀಜ್ ಸಯೀದ್ ಹಾಗೂ ಆಪ್ತರ ಶಸ್ತ್ರಾಸ್ತ್ರಗಳ ಪರವಾನಗಿ ರದ್ದುಗೊಳಿಸಿದ ಪಾಕ್

Lingaraj Badiger
ಇಸ್ಲಾಮಾಬಾದ್: ಜಮಾತ್ ಉದ್ ದಾವಾ ಉಗ್ರ ಸಂಘಟನೆಯ ಮುಖ್ಯಸ್ಥ ಹಫೀಜ್ ಸಯೀದ್ ತನ್ನ ದೇಶಕ್ಕೆ ಮಾರಕ ಎಂದು ಅರಿತ ಪಾಕಿಸ್ತಾನ ಇದೀಗ, ಸಯೀದ್ ಗೆ ಹಾಗೂ ಆತನ ಸಂಘಟನೆಯ ಸದಸ್ಯರಿಗೆ ನೀಡಿದ್ದ 44 ಶಸ್ತ್ರಾಸ್ತ್ರಗಳ ಪರವಾನಗಿಯನ್ನು ಮಂಗಳವಾರ ರದ್ದುಗೊಳಿಸಿದೆ.
ಜೆಯುಡಿ, ಸಯೀದ್ ಹಾಗೂ ಫಲಹಾ ಇ ಇನ್ಸಾತ್(ಫಿಐಎಫ್) ಸಂಘಟನೆ ವಿರುದ್ಧ ಪಾಕಿಸ್ತಾನ ಸರ್ಕಾರ ಕ್ರಮ ತೆಗೆದುಕೊಂಡಿದ್ದು, ಅವರ ಬಳಿ ಇರುವ ಶಸ್ತ್ರಾಸ್ತ್ರಗಳ ಪರವಾನಗಿಯನ್ನು ರದ್ದುಗೊಳಿಸಲಾಗಿದೆ ಎಂದು ಪಂಜಾಬ್ ಗೃಹ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಭದ್ರತೆಯ ದೃಷ್ಟಿಯಿಂದ ಪಂಜಾಬ್ ಗೃಹ ಇಲಾಖೆ ಸಯೀದ್ ಹಾಗೂ ಆತನ ಆಪ್ತರ 44 ಶಸ್ತ್ರಾಸ್ತ್ರಗಳ ಪರವಾನಗಿಯನ್ನು ರದ್ದುಗೊಳಿಸಿದೆ ಎಂದು ಅಧಿಕಾರಿಗಳು ಪಿಟಿಐಗೆ ತಿಳಿಸಿದ್ದಾರೆ.
ಪಾಕ್ ಸರ್ಕಾರ ಕಳೆದ ಜನವರಿ 30ರಿಂದ ಹಫೀಸ್ ಸಯೀದ್ ನನ್ನು 90 ದಿನಗಳ ಅವಧಿಗೆ ಲಾಹೋರ್ ನಲ್ಲಿ ಗೃಹ ಬಂಧನದಲ್ಲಿರಿಸಿದೆ. ಅಲ್ಲದೆ ಸಯೀದ್ ಸೇರಿದಂತೆ ಜೆಯುಡಿ ಮತ್ತು ಫಿಐಎಫ್ 37 ಸದಸ್ಯರಿಗೆ ದೇಶಬಿಟ್ಟು ಹೋಗದಂತೆ ನಿರ್ಬಂಧ ವಿಧಿಸಲಾಗಿದೆ.
ಇಂದು ಬೆಳಗ್ಗೆಯಷ್ಟೆ ಮುಂಬೈ ದಾಳಿಯ ರೂವಾರಿ ಹಫೀಜ್ ಸಯೀದ್, ನಮ್ಮ ದೇಶಕ್ಕೆ ಅಪಾಯ ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸೀಫ್ ಹೇಳಿದ್ದರು. ಈ ಮೂಲಕ ರಾಷ್ಟ್ರೀಯ ಹಿತಾಸಕ್ತಿಗೆ ಉಗ್ರ ಹಫೀಜ್ ಸಯೀದ್ ಮಾರಕವಾಗಿದ್ದಾನೆ ಎಂದು ಖಾವಾಜಾ ಆಸೀಫ್ ಒಪ್ಪಿಕೊಂಡಿದ್ದಾರೆ.
SCROLL FOR NEXT