ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶ್ರೀನಿವಾಸ್ ಪತ್ನಿ ಸುನಯನಾ ದುಮಾಲಾ
ಹೂಸ್ಟನ್: ಅಮೆರಿಕಾದ ಕನ್ಸಾಸ್ ನ ಒಲಾತೆ ನಗರದ ಬಾರ್ ಒಂದರಲ್ಲಿ ಭಾರತೀಯ ಮೂಲದ ಎಂಜಿನಿಯರ್ ಶ್ರೀನಿವಾಸ್ ಕುಚಿಬೊಟ್ಲಾ ಎಂಬುವವರನ್ನು ಗುಂಡಿಟ್ಟು ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರತಿಕ್ರಿಯೆ ನೀಡಿರುವ ಅವರ ಪತ್ನಿ ಅಮೆರಿಕಾದಲ್ಲಿ ತಮಗೆ ನೆಲೆಸಲು ಭಯವಿತ್ತು, ಆದರೆ ತಮ್ಮ ಪತಿಯೇ ನನಗೆ ಅಮೆರಿಕಾದಲ್ಲಿ ಒಳ್ಳೆಯದಾಗಬಹುದು ಎಂದು ಭರವಸೆ ನೀಡುತ್ತಿದ್ದರು ಎಂದು ಹೇಳಿದ್ದಾರೆ.
ಶ್ರೀನಿವಾಸ್ ಕೆಲಸ ಮಾಡುತ್ತಿದ್ದ ಜಿಪಿಎಸ್ ಮೇಕರ್ ಜರ್ಮಿನ್ ಕಂಪೆನಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪತ್ನಿ ಸುನಾಯಾನಾ ದುಮಲಾ, ಅಮೆರಿಕಾದಲ್ಲಿರುವ ತಾರತಮ್ಯದಿಂದಾಗಿ ಅಲ್ಪಸಂಖ್ಯಾತರು ಹೆದರುವಂತಾಗಿದೆ. ನಾವು ಇಲ್ಲಿಗೆ ಸೇರಿದವರೇ ಎಂದು ಪ್ರಶ್ನೆ ಮಾಡಿದರು. ಅಲ್ಪಸಂಖ್ಯಾತರ ವಿರುದ್ಧ ದ್ವೇಷ ಅಪರಾಧ ನಡೆಯುವುದನ್ನು ನಿಲ್ಲಿಸಲು ಅಮೆರಿಕಾ ಸರ್ಕಾರ ಏನು ಮಾಡುತ್ತಿದೆ ಎಂದು ಆಶ್ಟರ್ಯವಾಗುತ್ತಿದೆ ಎಂದರು.
ಅಮೆರಿಕಾದಲ್ಲಿ ನಡೆಯುವ ಶೂಟೌಟ್ ಪ್ರಕರಣಗಳನ್ನು ನೋಡಿದಾಗ ಭೀತಿಯುಂಟಾಗುತ್ತಿತ್ತು. ಆತಂಕವುಂಟಾಗಿ ನಾವಿಲ್ಲಿ ನೆಲೆಸಬೇಕೆ, ಬಿಟ್ಟು ನಮ್ಮ ದೇಶಕ್ಕೆ ಹೋಗೋಣ ಎನ್ನುತ್ತಿದ್ದೆ. ಆದರೆ ತಮ್ಮ ಪತಿ ಅಮೆರಿಕಾದಲ್ಲಿ ಮುಂದೆ ಒಳ್ಳೆಯದಾಗಬಹುದು ಎಂದು ಹೇಳುತ್ತಿದ್ದರು ಎನ್ನುತ್ತಾರೆ.
ಪ್ರಸ್ತುತ ಪರಿಸ್ಥಿತಿಯನ್ನು ಹ್ಯೂಸ್ಟನ್ ನಲ್ಲಿರುವ ಕೌನ್ಸಲ್ ಜನರಲ್ ಆಫ್ ಇಂಡಿಯಾ ಅನುಪಮ್ ರಾಯ್ ಮೇಲ್ವಿಚಾರಣೆ ನಡೆಸುತ್ತಿದ್ದು, ಕಾನ್ಸಾಸ್ ನ ಒಲತೆ ಪ್ರದೇಶದಲ್ಲಿರುವ ಸಂತ್ರಸ್ತ ಕುಟುಂಬಕ್ಕೆ ಎಲ್ಲಾ ರೀತಿಯ ನೆರವು ನೀಡುತ್ತಿದ್ದಾರೆ.
ಘಟನೆ ನಡೆದ ತಕ್ಷಣ ಭಾರತೀಯ ದೂತಾವಾಸ ಕಚೇರಿಯ ಉಪ ರಾಯಭಾರಿ ಆರ್.ಡಿ.ಜೋಶಿ ಮತ್ತು ಸಹಾಯಕ ರಾಯಭಾರಿ ಹೆಚ್.ಸಿಂಗ್ ಕಾನ್ಸಾಸ್ ಗೆ ತೆರಳಿದ್ದು, ಈ ಸಮಯದಲ್ಲಿ ಶ್ರೀನಿವಾಸ್ ಕುಟುಂಬದ ಜೊತೆ ನೆರವಿಗೆ ಇದ್ದಾರೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ರಾಯಭಾರಿ ಜೋಶಿಯವರು ಒಲತೆಯಲ್ಲಿರುವ ಭಾರತೀಯ ಸಮುದಾಯವನ್ನು ಹಾಗೂ ಘಟನೆಯಲ್ಲಿ ಗಾಯಗೊಂಡಿರುವ ಅಲೋಕ್ ಮದಸನಿಯನ್ನು ಭೇಟಿ ಮಾಡಿದ್ದಾರೆ. ಮದಸನಿಯವರ ಆರೋಗ್ಯ ಸ್ಥಿರವಾಗಿದ್ದು ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.