ಲಿಮೊ ಕಾರಿನಲ್ಲಿ ಕುಳಿತು ಅಭ್ಯಾಸ ಮಾಡುತ್ತಿರುವ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್
ನ್ಯೂಯಾರ್ಕ್: ಪ್ರಯತ್ನದಿಂದ ಪರಿಪೂರ್ಣತೆ ಸಿದ್ಧಿಸುತ್ತದೆ ಎನ್ನುವುದು ಜನಜನಿತ ಮಾತು. ಅಮೆರಿಕ ಕಾಂಗ್ರೆಸ್ ನ್ನು ಉದ್ದೇಶಿಸಿ ಚೊಚ್ಚಲ ಭಾಷಣ ಮಾಡಲು ಹೊರಟ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕ್ಯಾಪಿಟಲ್ ಹಿಲ್ ಕಡೆ ಲಿಮೊ ಕಾರಿನಲ್ಲಿ ಕುಳಿತುಕೊಂಡು ಹೋಗುವಾಗ ತಾವು ಮಾಡಬೇಕಾದ ಭಾಷಣವನ್ನು ಅಭ್ಯಾಸ ಮಾಡಿಕೊಂಡು ಹೋಗಿದ್ದರು.
ಅವರನ್ನೇ ಹಿಂಬಾಲಿಸಿದ್ದ ಲೈವ್ ಕ್ಯಾಮರಾಗಳು, ಸುದ್ದಿ ಸಂಸ್ಥೆಗಳು ತಮ್ಮ ಕ್ಯಾಮರಾಗಳಲ್ಲಿ ಸೆರೆ ಹಿಡಿದವು. ಆದರೆ ಇವು ಯಾವುದರ ಅರಿವೂ ಅಧ್ಯಕ್ಷರಿಗಿರಲಿಲ್ಲ. ಅವರು ತಮ್ಮ ಪಾಡಿಗೆ ಅಭ್ಯಾಸದಲ್ಲಿ ನಿರತರಾಗಿದ್ದರು.ಇದೀಗ ಟ್ವಿಟ್ಟರ್ ನಲ್ಲಿ ಅವರು ಕಾರಿನಲ್ಲಿ ಕುಳಿತು ಭಾಷಣವನ್ನು ಅಭ್ಯಾಸ ಮಾಡುತ್ತಿದ್ದ ವಿಡಿಯೋ ಹರಿದಾಡುತ್ತಿದೆ.
ಜಂಟಿ ಅಧಿವೇಶನವನ್ನುದ್ದೇಶಿಸಿ ಮಾತನಾಡಿದ ಡೊನಾಲ್ಡ್ ಟ್ರಂಪ್ ಭಾರತೀಯ ಮೂಲದ ಎಂಜಿನಿಯರ್ ಹತ್ಯೆ, ಇಸ್ಲಾಮಿಕ್ ಭಯೋತ್ಪಾದನೆ, ವಲಸೆ ಆದೇಶ, ಅಮೆರಿಕ ಮತ್ತು ಮೆಕ್ಸಿಕೊ ನಡುವಣ ಗೋಡೆ ನಿರ್ಮಾಣ ಇತ್ಯಾದಿ ಅನೇಕ ವಿಷಯಗಳನ್ನು ಪ್ರಸ್ತಾಪಿಸಿರಬಹುದು. ಆದರೆ ಸಾಮಾಜಿಕ ಜಾಲತಾಣದಲ್ಲಿ ಇಂದು ಹೈಲೈಟ್ ಆಗಿದ್ದು, ಅವರ ಅಭ್ಯಾಸ ಭಾಷಣ. ಅಭ್ಯಾಸ ಮಾಡುತ್ತಿರುವ ಕ್ಲಿಪಿಂಗ್ ಹಾಕಿ ಟ್ವಿಟ್ಟರ್ ನಲ್ಲಿ ಟ್ರೋಲ್ ಮಾಡುತ್ತಿರುವುದು ನಿಂತಿಲ್ಲ.
''check this out. Trump practicing his address in the back of the limo'' ಎಂದು ಬರೆದು ವಿಡಿಯೊ ಹಾಕಲಾಗಿದೆ. ಇದಕ್ಕೆ ಟ್ವೀಟ್ ಮಾಡಿದ 4 ಗಂಟೆಗಳೊಳಗೆ 1,600 ಲೈಕ್ಸ್ ಮತ್ತು 1,100 ರಿಟ್ವೀಟ್ ಗಳು ಬಂದಿವೆ.
ಕೆಲವರು ಟ್ರಂಪ್ ಅವರ ಅಭ್ಯಾಸವನ್ನು ನೋಡಿ ಖುಷಿಪಟ್ಟು ಟ್ವೀಟ್ ಮಾಡಿದರೆ, ಇನ್ನು ಕೆಲವರು ಟೀಕಿಸಿ, ತಮಾಷೆಯಾಗಿ ಬರೆದಿದ್ದಾರೆ. ಚಿಕ್ಕ ಮಕ್ಕಳು ಪರೀಕ್ಷೆಗೆ ಉರು ಹೊಡೆಯುವ ಥರ ಅಧ್ಯಕ್ಷರು ಅಭ್ಯಾಸ ಮಾಡಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.