ವಿದೇಶ

ಭಾರತದ ಅಗ್ನಿ ಕ್ಷಿಪಣಿ ವಿಶ್ವಸಂಸ್ಥೆಯ ಮಿತಿಯನ್ನು ಮೀರಿದೆ: ಚೀನಾ

Srinivasamurthy VN

ಬೀಜಿಂಗ್: ಇತ್ತೀಚೆಗೆ ಭಾರತ ಉಡಾಯಿಸಿದ್ದ ಅಗ್ನಿ-5 ಕ್ಷಿಪಣಿ ವಿಶ್ವಸಂಸ್ಥೆಯ ಮಿತಿಗಳನ್ನು ಮೀರಿದೆ ಎಂದು ಚೀನಾ ಅಸಮಾಧಾನ ವ್ಯಕ್ತಪಡಿಸಿದೆ.

ಚೀನಾ ಸರ್ಕಾರದ ಮುಖವಾಣಿ ಗ್ಲೋಬಲ್ ಟೈಮ್ಸ್ ನಲ್ಲಿ ಈ ಬಗ್ಗೆ ಚೀನಾ ತನ್ನ ಅಸಮಾಧಾನ ವ್ಯಕ್ತಪಡಿಸಿದ್ದು, ಚೀನಾ ದೇಶದ ಸುಮಾರು ಅರ್ಧದಷ್ಟು ಭಾಗದ ಯಾವುದೇ ಗುರಿಯನ್ನು ತಲುಪಬಲ್ಲ ಸಾಮರ್ಥ್ಯವಿರುವ ಅಗ್ನಿ-5 ಕ್ಷಿಪಣಿ  ಯೋಜನೆ ವಿಶ್ವಸಂಸ್ಥೆಯ ಮಿತಿಗಳನ್ನು ಮೀರಿದ್ದಾಗಿದೆ ಎಂದು ಹೇಳಿದೆ. ಗ್ಲೋಬಲ್ ಟೈಮ್ಸ್ ಸಂಪಾದಕೀಯದಲ್ಲಿ ಈ ಬಗ್ಗೆ ಮಾತನಾಡಿರುವ ಚೀನಾ, ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಶಾಶ್ವತ ಸದಸ್ಯತ್ವ ಬಯಸುತ್ತಿರುವ ಭಾರತ  ವಿಶ್ವಸಂಸ್ಥೆಯ ನಿಯಮಾವಳಿಗಳನ್ನು ಗಾಳಿಗೆ ತೂರಿ ಕ್ಷಿಪಣಿಯೋಜನೆಗಳನ್ನು ಅಭಿವೃದ್ಧಿ ಪಡಿಸುತ್ತಿದೆ. ಅಮೆರಿಕ ಸೇರಿದಂತೆ ಇತರೆ ದೇಶಗಳೂ ವಿಶ್ವಸಂಸ್ಥೆಯ ಮಿತಿಗಳನ್ನು ಗಾಳಿಗೆ ತೂರಿ ಶಸ್ತ್ರಾಸ್ತ್ರಗಳ ಅಭಿವೃದ್ದಿಯಲ್ಲಿ ತೊಡಗಿವೆ  ಎಂದು ಚೀನಾ ಕಿಡಿ ಕಾರಿದೆ.

ಭಾರತ ಅಗ್ನಿ-5 ಮತ್ತು ಅಗ್ನಿ-4 ಕ್ಷಿಪಣಿ ಯೋಜನೆಗಳಲ್ಲಿ ವಿಶ್ವಸಂಸ್ಥೆ ಭದ್ರತಾ ಮಂಡಳಿ ಮತ್ತು ದಕ್ಷಿಣ ಏಷ್ಯಾದ ಭದ್ರತಾ ಸಮತೋಲನ ನಿಯಮಗಳನ್ನು ಗಾಳಿಗೆ ತೂರಿದೆ. ಅಣ್ವಸ್ತ್ರ ಸಿಡಿತಲೆಗಳನ್ನು ಹೊತ್ತೊಯ್ಯಬಲ್ಲ ಕ್ಷಿಪಣಿ ಪರೀಕ್ಷೆ  ನಡೆಸುವ ಅಧಿಕಾರ ಭಾರತಕ್ಕೆ ಇದೆಯೇ ಎಂಬ ಬಗ್ಗೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸ್ಪಷ್ಟವಾದ ನಿಯಮ ಹೊಂದಿದೆ. ಈ ನಿಯಮವನ್ನು ಮೀರಿ ಭಾರತ ಪರೀಕ್ಷೆ ನಡೆಸಿದೆ ಎಂದು ಚೀನಾ ಆರೋಪಿಸಿದೆ.

ಅಂತೆಯೇ ಭಾರತದ ಕ್ಷಿಪಣಿ ಯೋಜನೆಗಳನ್ನು ಚೀನಾ ಎಂದಿಗೂ ಬೆದರಿಕೆ ಎಂದು ಭಾವಿಸುವುದಿಲ್ಲ. ಯಾವುದೇ ದೇಶದ ಬಾಹ್ಯ ಬೆದರಿಕೆಗಳನ್ನು ಎದುರಿಸುವ ಶಕ್ತಿ ಮತ್ತು ಸಾಮರ್ಥ್ಯ ಚೀನಾ ಸೇನೆಗಿದೆ. ಆದರೆ ಚೀನಾ ಭಾರತ  ದೇಶದ ಪ್ರತಿಸ್ಪರ್ಧಿಯಲ್ಲ. ಬದಲಾಗಿ ಭಾರತದ ಸಹಕಾರಕ್ಕೆ ಪಾಲುದಾರರು ಎಂದು ಹೇಳಿಕೊಂಡಿದೆ. ಪರಸ್ಪರ ಸಹಕಾರದ ವಿಚಾರದಲ್ಲಿ ಭಾರತದೊಂದಿಗೆ ಚೀನಾ ನಿಲ್ಲುತ್ತದೆಯಾದರೂ ಅಣ್ವಸ್ತ್ರ ಅಭಿವೃದ್ಧಿ ವಿಚಾರದಲ್ಲಿ ಯಾವುದೇ  ದೇಶವಾದರೂ ವಿಶ್ವಸಂಸ್ಥೆಯ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕಾಗುತ್ತದೆ. ಭಾರತ ಮತ್ತು ಪಾಕಿಸ್ತಾನ ದೇಶಗಳು ಅಣ್ವಸ್ತ್ರ ಅಭಿವೃದ್ಧಿ ರೇಸ್ ನಲ್ಲಿದ್ದು, ಪಾಕಿಸ್ತಾನ ಬಯಸಿದರೆ ದೂರಗಾಮಿ ಕ್ಷಿಪಣಿ ಯೋಜನೆಯಲ್ಲಿ ತಾನು  ಸಹಕಾರ ನೀಡಲು ಸಿದ್ಧ ಎಂದು ಪರೋಕ್ಷವಾಗಿ ಭಾರತಕ್ಕೆ ಚೀನಾ ಟಾಂಗ್ ನೀಡಿದೆ.

ಒಟ್ಟಾರೆ ಭಾರತದ ಅತ್ಯಂತ ದೂರಗಾಮಿ ಕ್ಷಿಪಣಿ ಅಗ್ನಿ-5 ಯಶಸ್ಸಿನ ಬಳಿಕ ಚೀನಾ ಒಳಗಿಂದೊಳಗೇ ಕುದಿಯುತ್ತಿದ್ದು, ಭಾರತದ ಯೋಜನೆಯನ್ನು ವಿಶ್ವಸಂಸ್ಥೆಯಲ್ಲಿ ಪ್ರಶ್ನಿಸುವುದಾಗಿ ಹೇಳುತ್ತಿದೆ.

SCROLL FOR NEXT