ವಿದೇಶ

ಪಾಕಿಸ್ತಾನ ಕ್ಷಿಪಣಿ ಪರೀಕ್ಷೆಯನ್ನೇ ನಡೆಸಿಲ್ಲ: ನೌಕಾದಳದ ಮಾಹಿತಿ

Srinivasamurthy VN

ಇಸ್ಲಾಮಾಬಾದ್: ಮಂಗಳವಾರ ಪಾಕಿಸ್ತಾನ ಸಬ್ ಮೆರಿನ್ ನಿಂದ ಕ್ಷಿಪಣಿಯನ್ನು ಯಶಸ್ವಿಯಾಗಿ ಉಡಾವಣೆ ಮಾಡಿತ್ತು ಎಂಬ ಸುದ್ದಿ ವಿಶ್ವಾದ್ಯಂತ ವ್ಯಾಪಕವಾಗಿ ಹರಿದಾಡಿತ್ತು. ಆದರೆ ಈ ಸುದ್ದಿಯೇ ಸುಳ್ಳು ಎಂದು ಹೇಳಲಾಗುತ್ತಿದೆ.

ಖಾಸಗಿ ಸುದ್ದಿವಾಹಿನಿಯೊಂದು ವರದಿ ಮಾಡಿರುವಂತೆ ಪಾಕಿಸ್ತಾನದ ಕರಾವಳಿ ತೀರದ ಮೇಲೆ ಕಣ್ಣಿಟ್ಟಿರುವ ಭಾರತೀಯ ನೌಕಾಪಡೆಗಳು ಈ ಮಾಹಿತಿಯನ್ನು ಅಲ್ಲಗಳೆದಿದ್ದು, ಅಸಲಿಗೆ ಪಾಕಿಸ್ತಾನದ ವಲಯದಿಂದ ಯಾವುದೇ ಕ್ಷಿಪಣಿಗಳು ಹಾರಿಲ್ಲ ಎಂದು ತಿಳಿಸಿವೆ ಎಂದು ವರದಿ ಮಾಡಿದೆ. ನಿನ್ನೆಯಷ್ಟೇ ಪಾಕಿಸ್ತಾನ ತನ್ನ ಕರಾವಳಿ ತೀರದಿಂದ ಸಬ್ ಮೆರಿನ್ ಮೂಲಕ ಅಣ್ವಸ್ತ್ರ ಸಾಮರ್ಥ್ಯದ ಬಾಬುರ್-3 ಕ್ಷಿಪಣಿಯನ್ನು ಯಶಸ್ವಿಯಾಗಿ ಉಡಾಯಿಸಿದೆ. ಆ ಮೂಲಕ 'ಪರಮಾಣು ಟ್ರಯಾಡ್' (ಸಮುದ್ರ, ಭೂಮಿ ಮತ್ತು ಆಗಸದಿಂದ ಎದುರಾಗುವ ಪರಮಾಣು ದಾಳಿ ಎದುರಿಸುವ) ಸಾಮರ್ಥ್ಯವನ್ನು ಹೊಂದಿರುವ ರಾಷ್ಟ್ರಗಳ ಪಟ್ಟಿಗೆ ಸೇರ್ಪಡೆಯಾಗಿದೆ ಎಂದು ಸುದ್ದಿಗಳು ಪ್ರಸಾರವಾಗಿತ್ತು.

ಆದರೆ ಈ ಸುದ್ದಿಗಳನ್ನು ಭಾರತೀಯ ಸೇನೆ ಅಲ್ಲಗಳೆದಿದ್ದು, ಪಾಕಿಸ್ತಾನದ ಕರಾವಳಿ ತೀರದಲ್ಲಿ ಯಾವುದೇ ಕ್ಷಿಪಣಿ ಪರೀಕ್ಷೆ ನಡೆದಿಲ್ಲ. ಈ ಸಂಬಂಧ ಬಿಡುಗಡೆಯಾಗಿದ್ದ ವಿಡಿಯೋ ಬಹುಶಃ ಸುಳ್ಳಾಗಿರಬಹುದು ಎಂದು ಸುದ್ದಿ ಮಾಧ್ಯಮವೊಂದಕ್ಕೆ ಮಾಹಿತಿ ನೀಡಿದೆ. ವಾಹಿನಿಯ ವರದಿಯಲ್ಲಿರುವ ಮಾಹಿತಿಗಳಂತೆ, ನೌಕಾಪಡೆ ಕ್ಷಿಪಣಿ ಪರೀಕ್ಷೆಯನ್ನು ಅಲ್ಲಗಳೆದಿದೆ. ಸೇನಾಧಿಕಾರಿಗಳು ಅಭಿಪ್ರಾಯಪಟ್ಟಿರುವಂತೆ ವಿಡಿಯೋವನ್ನು ಸೂಕ್ಷ್ಮವಾಗಿ ಪರಿಶೀಲಿಸಿದರೆ ಒಂದಲ್ಲ ಬದಲಿಗೆ ಎರಡು ಕ್ಷಿಪಣಿಗಳು ಕಾಣಸಿಗುತ್ತವೆ. ನೀರಿನಿಂದ ಸಿಡಿದ ಒಂದು ಕ್ಷಿಪಣಿ ಬೂದು ಬಣ್ಣದ ಕ್ಷಿಪಣಿ ಮತ್ತೊಂದು ಕಿತ್ತಳೆ ಬಣ್ಣದ ಕ್ಷಿಪಣಿಯಾಗಿದೆ. ಇದು ಕ್ಷಿಪಣಿ ಪರೀಕ್ಷೆ ಮೇಲೆ ಅನುಮಾನ ಮೂಡುವಂತಾಗಿದೆ ಎಂದು ಹೇಳಲಾಗುತ್ತಿದೆ.

ಮತ್ತೊಂದೆಡೆ ಪಾಕಿಸ್ತಾನ ತಾನು ಅಗೋಸ್ಟಾ90 ಬಿ ಸಬ್ ಮೆರಿನ್ ನಿಂದ ಅಣ್ವಸ್ತ್ರ ಸಿಡಿತಲೆಯ ಕ್ಷಿಪಣಿ ಪರೀಕ್ಷೆ ನಡೆಸಿರುವುದಾಗಿ ಹೇಳಿಕೊಳ್ಳುತ್ತಿದ್ದರೂ, ಭಾರತೀಯ ನೌಕಾದಳದ ಅಧಿಕಾರಿಗಳು ಮಾತ್ರ ಇದನ್ನು ನಂಬುತ್ತಿಲ್ಲ. ಕರಾವಳಿ ತೀರದಲ್ಲಿ ಅಂತಹ ಯಾವುದೇ ಜಲಾಂತರ್ಗಾಮಿಗಳ ಕಾರ್ಯಚಟುವಟಿಕೆ ಕಂಡುಬಂದಿಲ್ಲ. ಹೀಗಾಗಿ ಪಾಕಿಸ್ತಾನದ ಕ್ಷಿಪಣಿ ಪರೀಕ್ಷೆಯೇ ಸುಳ್ಳಾಗಿರಬಹುದು ಎಂದು ಅಭಿಪ್ರಾಯಪಟ್ಟಿದೆ.

ಆದರೂ ಈ ಸುದ್ದಿಯನ್ನು ಗಂಭೀರವಾಗಿ ಪರಿಗಣಿಸಿರುವ ನೌಕಾಪಡೆಗಳ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

SCROLL FOR NEXT