ಪ್ಯಾರಿಸ್ ದಾಳಿಯ ಪ್ರಮುಖ ಆರೋಪಿ ಸಲಾಹ್ ಅಬ್ಡೆಸ್ಲಾಂ
ಪ್ಯಾರಿಸ್ ದಾಳಿಯ ಪ್ರಮುಖ ಆರೋಪಿ ತಾನು ಜೈಲಿನಿಂದ ಮಹಿಳೆಯೊಬ್ಬರಿಗೆ ಬರೆಯುತ್ತಿದ್ದ ಪತ್ರದಲ್ಲಿ, ಎಸಗಿದ ಕೃತ್ಯಕ್ಕೆ 'ನನಗೇನು ನಾಚಿಕೆಯಿಲ್ಲ' ಎಂದು ಬರೆದಿರುವುದಾಗಿ ಶುಕ್ರವಾರ ಮಾಧ್ಯಮವೊಂದು ವರದಿ ಮಾಡಿದೆ.
ಇಸ್ಲಾಮಿಕ್ ಸ್ಟೇಟ್ ನವೆಂಬರ್ ೧೩, ೨೦೧೫ ರಂದು ನಡೆಸಿದ ಮಾರಣಾಂತಿಕ ದಾಳಿಯಲ್ಲಿ ೧೩೦ ಜನ ಮೃತಪಟ್ಟಿದ್ದರು. ಈ ದಾಳಿಯ ಬಗ್ಗೆ ಪ್ರಶೆಗಳಿಗೆ ಉತ್ತರಿಸಲು ಆರೋಪಿ ಸಲಾಹ್ ಅಬ್ಡೆಸ್ಲಾಂ ಫ್ರೆಂಚ್ ನ್ಯಾಯಾಧೀಶರಿಗೆ ನಿರಾಕರಿಸಿದ್ದಾನೆ.
ಅನಾಮಧೇಯ ಮಹಿಳೆಯೊಬ್ಬರಿಗೆ ಅಬ್ಡೆಸ್ಲಾಂ ಬರೆಯುತ್ತಿದ್ದ ಪತ್ರದ ಭಾಗವನ್ನು ದಿನಪತ್ರಿಕೆಯೊಂದು ಪ್ರಕಟಿಸಿದ್ದು "ಮೊದಲಿಗೆ, ನನಗೆ ಯಾವುದನ್ನು ಕಳೆದುಕೊಳ್ಳುವ ಭಯವಿಲ್ಲ ಏಕೆಂದರೆ ನನ್ನ ಈ ಸ್ಥಿತಿಯ ಬಗ್ಗೆ ನಾಚಿಕೆಯೇನಿಲ್ಲ - ಈಗಾಗಲೇ ಹೇಳಿರುವುದಕ್ಕಿಂತಲೂ ಹೆಚ್ಚು ಕೆಟ್ಟದ್ದು ಹೇಳಲೇನು ಸಾಧ್ಯ" ಎಂದು ಬರೆದಿರುವುದಾಗಿ ವರದಿ ಮಾಡಿದೆ.
"ಹೇಗೆ ಪ್ರಾರಂಭಿಸುವುದು ಎಂದು ತಿಳಿಯದೆ ನಾನು ನಿನಗೆ ಈ ಪತ್ರ ಬರೆಯುತ್ತಿದ್ದೇನೆ, ನಿನ್ನೆಲ್ಲ ಪತ್ರಗಳು ನನಗೆ ಸಿಕ್ಕವು ಮತ್ತು ಅವುಗಳು ನನಗೆ ಸಂತಸ ತಂದವೋ ಇಲ್ಲ ತಿಳಿಯದು, ಆದರೆ ಹೊರಗಿನ ವಿಶ್ವದ ಜೊತೆಗೆ ಸ್ವಲ್ಪ ಸಮಯ ಕಳೆಯುವಂತೆ ಮಾಡಿದವು" ಎಂದು ಮುಂದುವರೆದು ಬರೆದಿದ್ದಾನೆ.
ಅಬ್ಡೆಸ್ಲಾಂಗೆ ಹಲವು ಜನರಿಂದ ಸಂದೇಶಗಳು ಬಂದಿದ್ದರು, ಈ ಒಬ್ಬ ಮಹಿಳೆಗೆ ಮಾತ್ರ ಉತ್ತರಿಸಿದ್ದಾನೆ ಎಂದು ದಿನಪತ್ರಿಕೆ ವರದಿ ಮಾಡಿದೆ.
ಬ್ರಸ್ಸಲ್ಸ್ ನಲ್ಲಿ ಬಂಧಿತನಾಗಿದ್ದ ೨೭ ವರ್ಷದ ಅಬ್ಡೆಸ್ಲಾಂನನ್ನ ಏಪ್ರಿಲ್ ನಲ್ಲಿ ಫ್ರಾನ್ಸ್ ಗೆ ವರ್ಗಾಯಿಸಲಾಗಿತ್ತು. ಫ್ರಾನ್ಸ್ ರಾಜಧಾನಿಯ ಮೇಲೆ ದಾಳಿ ಮಾಡಿದ ಜಿಹಾದಿ ಭಯೋತ್ಪಾದಕರಲ್ಲಿ ಬದುಕುಳಿದವನು ಅಬ್ಡೆಸ್ಲಾಂ ಒಬ್ಬನೇ ಎಂದು ನಂಬಲಾಗಿದೆ.