ವಾಷಿಂಗ್ ಟನ್: ಡೊನಾಲ್ಡ್ ಟ್ರಂಪ್, ಕಳೆದ 150 ವರ್ಷಗಳಲ್ಲಿ ಸಾಕು ಪ್ರಾಣಿಯೆ ಇಲ್ಲದೇ ಶ್ವೇತ ಭವನ ಪ್ರವೇಶಿಸುವ ಮೊದಲ ಅಧ್ಯಕ್ಷರಾಗಲಿದ್ದಾರಾ? ಹೀಗೊಂದು ಕುತೂಹಲದ ಪ್ರಶ್ನೆ ಎದುರಾಗಿದೆ.
ಜ.20 ರಂದು ಅಮೆರಿಕ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲಿರುವ ಡೊನಾಲ್ಡ್ ಟ್ರಂಪ್ ಅವರು ಈ ವರೆಗೂ ಯಾವುದೇ ಸಾಕು ಪ್ರಾಣಿಯನ್ನು ಹೊಂದಿರಲಿಲ್ಲ. ಈಗಲೂ ಹಾಗೆಯೇ ಶ್ವೇತ ಭವನಕ್ಕೆ ಟ್ರಂಪ್ ಪ್ರವೇಶಿಸಲಿದ್ದು, ಡೊನಾಲ್ಡ್ ಟ್ರಂಪ್ ಸಾಕು ಪ್ರಾಣಿ ಇಲ್ಲದೇ ಶ್ವೇತ ಭವನ ಪ್ರವೇಶಿಸುತ್ತಿರುವ ಮೊದಲ ಅಧ್ಯಕ್ಷರಾಗಲಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.
ಈ ವರೆಗೂ ಅಧಿಕಾರದಲ್ಲಿದ್ದ ಬಹುತೇಕ ಅಮೆರಿಕಾದ ಅಧ್ಯಕ್ಷರ ಸಾಕು ಪ್ರಾಣಿಗಳ ಪ್ರೀತಿ ಇತಿಹಾಸ ಪ್ರಸಿದ್ಧವಾಗಿದ್ದು, ಜನಸಾಮಾನ್ಯರಲ್ಲಿ ಅಮೆರಿಕದ ಮೊದಲನೇ ಕುಟುಂಬವೂ ತಮ್ಮಂತೆಯೇ ಎಂಬ ಭಾವನೆ ಮೂಡಿಸಲು ಸಾಕು ಪ್ರಾಣಿಗಳನ್ನು ಸಾಕುವ ಅಭ್ಯಾಸ ಹೊಂದಿದ್ದರು.
ಅಮೆರಿಕ ಅಧ್ಯಕ್ಷರ ಸಾಕು ಪ್ರಾಣಿಗಳಿಗೆ ಸಂಬಂಧಿಸಿದ ಸಂಗ್ರಹಾಲಯದ ಮೂಲಕ ಜನತೆಗೆ ಹಾಗೂ ಮುಂದಿನ ಪೀಳಿಗೆಗೆ ಅಧ್ಯಕ್ಷರುಗಳ ಬಗ್ಗೆ ಪರಿಣಾಮಕಾರಿಯಾಗಿ ತಿಳಿಸಬಹುದು ಎಂದು ಮ್ಯೂಸಿಯಂ ನ ಸ್ಥಾಪಕ ಕ್ಲೇರ್ ಮ್ಯಾಕ್ಲೀನ್ ಅಭಿಪ್ರಾಯಪಟ್ಟಿದ್ದಾರೆ.
ಅಮೆರಿಕದ ನಿರ್ಗಮಿತ ಅಧ್ಯಕ್ಷ ಬರಾಕ್ ಒಬಾಮ ಅವರ ಕುಟುಂಬದ ಪೋರ್ಚುಗೀಸ್ ತಳಿ ನಾಯಿಗಳಾದ `ಬೋ' ಮತ್ತು `ಸನ್ನಿ' ಅಮೆರಿಕನ್ನರ ಗಮನ ಸೆಳೆದಿದ್ದವು. ಅದಕ್ಕೂ ಹಿಂದಿದ್ದ ಅಮೆರಿಕ ಅಧ್ಯಕ್ಷ ಜಾರ್ಜ್ ಡಬ್ಲ್ಯೂ ಬುಷ್ ಸ್ಕಾಟಿಷ್ ಟೆರಿಯರ್ ತಳಿಯ ಶ್ವಾನವನ್ನು ಸಾಕಿದ್ದರೆ ಅಮೆರಿಕದ ಮತ್ತೋರ್ವ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಲ್ಯಾಬ್ರಡಾರ್ ತಳಿಯ ನಾಯಿಯನ್ನು ಸಾಕಿದ್ದರು. ಅಮೆರಿಕದ 27 ನೇ ಅಧ್ಯಕ್ಷ ವಿಲಿಯಮ್ ಹಾವರ್ಡ್ ಟಪ್ಟ್ ಹಸುವನ್ನು ಸಾಕಿದ್ದರು.